ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹನೀಯರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದು, ಯೋಗ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದ 125 ವರ್ಷದ ಸ್ವಾಮಿ ಶಿವಾನಂದ ಅವರ ನಡೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಶಸ್ತಿ ಸ್ವೀಕರಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ,ಇನ್ನಿತರ ಗಣ್ಯರು, ರಾಷ್ಟ್ರಪತಿಗಳಿದ್ದ ಸಭೆಗೆ ಸ್ವಾಮಿ ಶಿವಾನಂದ ನಮಸ್ಕರಿಸಿದರು. ನಂತರ ಬರಿಗಾಲಲ್ಲಿ ವೇದಿಕೆ ಬಂದು ಪ್ರಶಸ್ತಿ ಸ್ವೀಕರಿಸಿದರು.
ಸ್ವಾಮಿ ಶಿವಾನಂದರ ಈ ಹೃದಯಸ್ಪರ್ಶಿ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ಅವರು ಪ್ರಶಸ್ತಿ ಸ್ವೀಕರಿಸುವಾಗ ಸಭೆಯಲ್ಲಿ ನೆರೆದಿದ್ದ ಗಣ್ಯರು ಎದ್ದು ನಿಂತು ಕರತಾಡನ ಮಾಡುವ ಮೂಲಕ ಗೌರವ ಸೂಚಿಸಿದರು.
ಸ್ವಾಮಿ ಶಿವಾನಂದರು ಸಭೆಗೆ ನಮಸ್ಕರಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಶಿರಬಾಗಿ ಪ್ರಶಸ್ತಿ ಪುರಸ್ಕೃತರಿಗೆ ನಮಸ್ಕರಿಸಿದರು. ಸ್ವಾಮಿ ಶಿವಾನಂದ ಅವರು ಮಾನವ ಸಮಾಜದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ.
ಇಂದಿನ ಬಾಂಗ್ಲಾ ದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ 1896 ರ ಆಗಸ್ಟ್ 8 ರಂದು ಜನಿಸಿದ ಸ್ವಾಮಿ ಶಿವಾನಂದ ಅವರು ತಮ್ಮ 6 ನೇ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡರು. ಬಡತನದಲ್ಲೇ ಬೆಳೆದ ಸ್ವಾಮಿ ಶಿವಾನಂದ ಅವರು ಪೋಷಕರನ್ನು ಕಳೆದುಕೊಂಡ ಬಳಿಕ ಪಶ್ಚಿಮ ಬಂಗಾಳದಲ್ಲಿದ್ದ ಗುರೂಜಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಗುರು ಓಂಕಾರಾನಂದ ಗೋಸ್ವಾಮಿ ಸ್ವಾಮಿ ಶಿವಾನಂದ ಅವರನ್ನು ಬೆಳೆಸಿ ಯೋಗ, ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ಅಂದಿನಿಂದ ಇಂದಿನವರೆಗೂ ಸ್ವಾಮಿ ಶಿವಾನಂದ ಅವರು ಹಿಂದುಳಿದವರ ಸೇವೆಯಲ್ಲಿ ನಿರತರಾಗಿದ್ದು ಯೋಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.