ಕೀವ್: ರಷ್ಯಾ ನಡೆಸಿರುವ ಯುದ್ಧದದಲ್ಲಿ ಈ ವರೆಗೆ ಸುಮಾರು 1,300 ಉಕ್ರೇನಿಯನ್ ಸೈನಿಕರು ಹೋರಾಟದಲ್ಲಿ ಬಲಿಯಾಗಿದ್ದಾರೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್ ರಾಜಧಾನಿಯಲ್ಲಿ ಬಾಂಬ್ ಗಳ ಸುರಿದು ನಾಗರೀಕರ ಹತ್ಯೆಗೈದು ನಗರವನ್ನು ತನ್ನ ವಶ ಮಾಡಿಕೊಳ್ಳಲು ರಷ್ಯಾ ಮುಂದಾಗಿದೆ. ಅದೇ ಅವರ ಗುರಿಯಾಗಿದ್ದರೆ, ಅವರು ಬರಲಿ ಎಂದು ಹೇಳಿದ್ದಾರೆ.
ನಗರದಲ್ಲಿ ರಷ್ಯಾ ಬಾಂಬ್ ದಾಳಿ ನಡೆಸಿದರೆ, ಈ ಭಾಗದ ಐತಿಹಾಸಿಕವಾದ ನೆನಪುಗಳು, ಕೈವಾನ್ ರುಸ್ ಇತಿಹಾಸ, ಯೂರೋಪ್ ಇತಿಹಾಸವನ್ನು ನಾಶಪಡಿಸಿದಂತಾಗುತ್ತದೆ. ಕೀವ್'ಗೆ ಅವರು ಬರಲಿ ಎಂದು ತಿಳಿಸಿದ್ದಾರೆ.
ಮರಿಯುಪೋಲ್ ನಲ್ಲಿ 12 ದಿನಗಲ್ಲಿ 1582 ಮಂದಿ ಬಲಿ:
ದಕ್ಷಿಣ ಉಕ್ರೇನ್ ನ ಪ್ರಮುಖ ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾ ಬಿಟ್ಟೂಬಿಡದೇ ದಾಳಿ ನಡೆಸುತ್ತಿರುವ ಕಾರಣ ಇಡೀ ನಗರ ಅವಶೇಷಗಳಿಂದ ತುಂಬಿ ಹೋಗಿದೆ. ಕಳೆದ 12 ದಿನಗಳಿಂದ ಇಲ್ಲಿ ರಷ್ಯಾ ವಾಯುದಾಳಿ ನಡೆಸುತ್ತಿದ್ದು 1582 ಜನರು ಸಾವನ್ನಪ್ಪಿದ್ದಾರೆ.
ಶವಗಳನ್ನು ಹೂಳಲು ಜಾಗ ಸಿಗದ ಕಾರಣ ಪ್ರತ್ಯೇಕ ಸ್ಮಶಾನ ನಿರ್ಮಿಸಲಾಗಿದೆ. ಅಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂಳಲಾಗುತ್ತಿದೆ. ಆದರೆ, ಶನಿವಾರ ಶವ ಸಂಸ್ಕಾರ ಕೂಡ ನಡೆಸಲು ಬಿಡದೇ ರಷ್ಯಾ ಅಲ್ಲಿ ದಾಳಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಶನಿವಾರ ಮಾಹಿತಿ ನೀಡಿ, ಉಕ್ರೇನಿನಲ್ಲಿ ಯುದ್ಧ ಆರಂಭವಾಗಿನಿಂದ ಸುಮಾರು 579 ನಾಗರೀಕರು ರಷ್ಯಾ ಪಡೆಗಳ ದಾಳಿಯಲ್ಲಿ ಬಲಿಯಾಗಿದ್ದಾರೆಂದು ಹೇಳಿದೆ.
ಯುದ್ಧದಲ್ಲಿ 49 ಮಕ್ಕಳು ಸೇರಿದಂತೆ 579 ನಾಗರೀಕರು ಮೃತಪಟ್ಟಿದ್ದಾರೆ. 54 ಮಕ್ಕಳು ಸೇರಿದಂತೆ 1000ಕ್ಕೂ ಹೆಚ್ಚು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾದ ಬಾಂಬ್, ಶೆಲ್ ಹಾಗೂ ಕ್ಷಿಪಣಿ ದಾಳಿಯೇ ಬಹುತೇಕ ಜನರು ಬಲಿಯಾಗಿದ್ದಾರೆಂದು ತಿಳಿಸಿದೆ.
ಮಾಹಿತಿ ಸ್ವೀಕೃತಿಯಲ್ಲಿನ ವಿಳಂಬ ಹಾಗೂ ಇನ್ನೂ ಅನೇಕ ವರದಿಗಳನ್ನು ದೃಢಿಕರಿಸುವ ಅಗತ್ಯವಿರುವುದರಿಂದ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಿದೆ.