ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಆಹಾರೇತರ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಫೆಬ್ರವರಿಯಲ್ಲಿ ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವೂ ಶೇಕಡಾ 13.11 ಕ್ಕೆ ಏರಿಕೆಯಾಗಿದೆ.
ಸೋಮವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2021 ರಿಂದ ಪ್ರಾರಂಭವಾಗಿ ಸತತ 11ನೇ ತಿಂಗಳೂ ಡಬ್ಲ್ಯುಪಿಐ ಹಣದುಬ್ಬರ ಎರಡಂಕಿಗಳಲ್ಲಿಯೇ ಉಳಿದಿದೆ.
ಡಬ್ಲ್ಯುಪಿಐ ಹಣದುಬ್ಬರ ಕಳೆದ ಜನವರಿಯಲ್ಲಿ ಶೇ. 12.96 ಇತ್ತು. ಅಂದ ಹಾಗೆ 2021ರ ಫೆಬ್ರವರಿಯಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ. 4.83 ರಷ್ಟು ಇತ್ತು. ಡಬ್ಲ್ಯುಪಿಐ ಹಣದುಬ್ಬರವು ಹೆಚ್ಚುತ್ತಿರುವ ವೆಚ್ಚವನ್ನು ಉತ್ಪಾದಕರು ತಮ್ಮ ಗ್ರಾಹಕರಿಗೆ ವರ್ಗಾಯಿಸುವುದರಿಂದ ಹೆಚ್ಚಿನ ಗ್ರಾಹಕ ಬೆಲೆಗಳಿಗೆ ಪೂರ್ವಭಾವಿಯಾಗಿ ಕಂಡುಬರುತ್ತದೆ.
"ಫೆಬ್ರವರಿ 2022 ರಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖವಾಗಿ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಪದಾರ್ಥಗಳು ಮತ್ತು ಆಹಾರೇತರ ವಸ್ತುಗಳು ಇತ್ಯಾದಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.