ಮಾಸ್ಕೋ: ಉಕ್ರೇನ್‌ನಲ್ಲಿನ ಯುದ್ಧದ ಕುರಿತು ರಷ್ಯಾ ಸರ್ಕಾರದ ನಿಲುವಿಗೆ ವಿರುದ್ಧವಾದ ಮಾಹಿತಿಯನ್ನು ಪ್ರಸಾರ ಮಾಡಿದರೆ ಅಥವಾ ಹಂಚಿಕೊಂಡರೆ 15 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ರಷ್ಯಾ ಸಂಸತ್ ಶುಕ್ರವಾರ ಅಂಗೀಕರಿಸಿದೆ.
ವಿದೇಶಿ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ರಷ್ಯಾ ಈ ಕಾನೂನು ಜಾರಿಗೆ ತಂದಿದ್ದು, "ನಕಲಿ ಸುದ್ದಿಗಳನ್ನು" ಉದ್ದೇಶಪೂರ್ವಕವಾಗಿ ಹರಡುವುದು ಅಪರಾಧ ಎಂಬ ಮಸೂದೆಯನ್ನು ರಷ್ಯಾದ ಸಂಸತ್ತು ಇಂದು ಸರ್ವಾನುಮತದಿಂದ ಅಂಗೀಕರಿಸಿದೆ.
ಈ ಕರಡು ಕಾನೂನನ್ನು ಸಂಸತ್ತಿನ ಕೆಳ ಮತ್ತು ಮೇಲ್ಮನೆಗಳಲ್ಲಿ ತ್ವರಿತ ಕ್ರಮವಾಗಿ ಅನುಮೋದಿಸಲಾಗಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಂಕಿತ ಹಾಕಿದ ನಂತರ ಕಾನೂನಾಗಿ ರೂಪಗೊಳ್ಳಲಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೊಸ ಕಾನೂನಿನ ಪ್ರಕಾರ ಸುಳ್ಳು ಹರಡುವವರ ವಿರುದ್ಧ ರಷ್ಯಾ ಅಧಿಕಾರಿಗಳು ಕ್ರಮ ಕೈಗೊಂಡು 3 ರಿಂದ 15 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದು. ಅಲ್ಲದೆ ರಷ್ಯಾದ ಮೇಲೆ ನಿರ್ಬಂಧ ವಿಧಿಸಲು ಕರೆ ನೀಡುವ ಸುದ್ದಿಗಳನ್ನು ಪ್ರಸಾರ ಮಾಡುವುದನ್ನೂ ಈ ಮಸೂದೆ ನಿಷೇಧಿಸುತ್ತದೆ.