ಕೀವ್: ಉಕ್ರೇನ್ನಲ್ಲಿ ರಷ್ಯಾ ದಾಳಿ ತೀವ್ರಗೊಂಡಿದೆ. ಬುಧವಾರ ರಷ್ಯಾ ಸೇನೆ ಮರಿಯುಪೋಲ್ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ ನಡಸಿರುವ ವಿಡಿಯೋವನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ತೀವ್ರ ಖಂಡನ ವ್ಯಕ್ತಪಡಿಸಿದ್ದಾರೆ.
ಇದು ದೌರ್ಜನ್ಯ. ಈ ಜಗತ್ತು ಇನ್ನೆಷ್ಟು ದಿನ ಇಂಥ ಭಯೋತ್ಪಾದನೆಯನ್ನು ನಿರ್ಲಕ್ಷಿಸುತ್ತದೆ? ಈ ಆಕಾಶವೇ ಮುಚ್ಚಿ, ಇಂಥ ದಾಳಿಗಳು ನಿಲ್ಲಬಾರದೆ? ನಿಮಗೆ ಶಕ್ತಿ ಇರಬಹುದು ಆದರೆ ಮಾನವೀಯತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ಝೆಲೆನ್ಸ್ಕಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ಆಸ್ಪತ್ರೆಯ ಒಳಗೆಲ್ಲ ಸಂಪೂರ್ಣವಾಗಿ ಧ್ವಂಸಗೊಂಡಿರುವುದು ಕಂಡು ಬಂದಿದೆ.
ಆಸ್ಪತ್ರೆಯ ಕಿಟಕಿಗಳೆಲ್ಲ ಮುರಿದು ಬಿದ್ದಿವೆ. ಗೋಡೆಗಳೂ ಒಡೆದು ಹೋಗಿದೆ. ಇದು ರಷ್ಯಾ ಸೇನೆಯ ನೇರ ದಾಳಿ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಈ ದುರ್ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು, ಯಾವುದೆ ಸಾವಿನ ವರದಿಯಾಗಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಮಕ್ಕಳಿಗೆ ಯಾರಿಗೂ ಗಾಯವಾಗಿಲ್ಲ. ಆದರೆ ಈ ಆಸ್ಪತ್ರೆ ಇನ್ನು ರಿಪೇರಿ ಮಾಡಲಾಗದಷ್ಟು ಧ್ವಂಸಗೊಂಡಿದೆ ಎಂದು ಹೇಳಲಾಗುತ್ತಿದೆ.
ಮರಿಯುಪೋಲ್ ಸಿಟಿಯನ್ನು ರಷ್ಯಾ ಸೇನೆ ಮುತ್ತಿಗೆ ಹಾಕಿದೆ. ಇದು ಆಗ್ನೇಯ ಉಕ್ರೇನ್ನಲ್ಲಿರುವ ಅಜೋವ್ ಸಮುದ್ರದ ದಡದಲ್ಲಿರುವ ಒಂದು ಬಂದರು ನಗರ. ಇಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದರೂ ಕೂಡ, ಆಗಾಗ ಅದನ್ನು ಉಲ್ಲಂಘನೆ ಮಾಡಿ ಬಾಂಬ್ ದಾಳಿ ನಡೆಸುತ್ತಲೇ ಇದೆ.