ಮುಂಬೈ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ 183 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಂಗೆರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಶನಿವಾರ ಬೆಳಗ್ಗೆ ಮುಂಬೈಗೆ ಬಂದಿಳಿದಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.
183 ಪ್ರಯಾಣಿಕರು ಮತ್ತು ಒಂದು ಶಿಶುವಿನೊಂದಿಗೆ ಏರ್ ಇಂಡಿಯಾ IX 1604 ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಗೆ ಬಂದಿಳಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆ. 26 ರಿಂದ ರೊಮೇನಿಯಾದ ಬುಕಾರೆಸ್ಟ್ ಮತ್ತು ಹಂಗೆರಿಯ ಬುಡಾಪೆಸ್ಟ್‌ನಿಂದ ಮುಂಬೈಗೆ ಸ್ಥಳಾಂತರ ಕಾರ್ಯಾಚರಣೆ ಕೈಗೊಂಡಿದ್ದು, ಉಕ್ರೇನ್‌ನಿಂದ 1,134 ಭಾರತೀಯರನ್ನು ಕರೆತಂದಿದೆ.
ಉಕ್ರೇನ್ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಫೆಬ್ರುವರಿ 24 ರಿಂದ ಭಾರತವು ಉಕ್ರೇನ್‌ನ ನೆರೆ ದೇಶಗಳಾದ ರೊಮೇನಿಯಾ, ಹಂಗೆರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ವಿಶೇಷ ವಿಮಾನಗಳ ಮೂಲಕ ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.