ಶಾಹೀದ್ ಭಗತ್ ಸಿಂಗ್ ನಗರ್: ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದಿರುವ ಎಎಪಿ ಪಕ್ಷದ ಭಗವಂತ್ ಮಾನ್ ಅವರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಲಾನ್ನಲ್ಲಿ 18ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸದ್ಯ ಭಗವಂತ್ ಮಾನ್ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಕ್ಯಾಬಿನೆಟ್ ಸಚಿವರು ಇನ್ನು ಕೆಲವೇ ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪಂಜಾಬ್ನ ಖಟ್ಕರ್ಕಲಾನ್ನಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿ ಅನೇಕರು ಶುಭಹಾರೈಸಿದರು.
ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಅಭಿನಂದನೆಗಳು. ಅವರ ಸಮರ್ಥ ನಾಯಕತ್ವದಲ್ಲಿ ಪಂಜಾಬ್ ಪ್ರಗತಿ ಕಾಣಲಿ. ಅಲ್ಲಿ ಸೋದರತ್ವ ಬೆಳೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.