ಚಂಢೀಗಡ: ಗಡಿ ರಾಜ್ಯ ಪಂಜಾಬಿನಲ್ಲಿ 117 ಸ್ಥಾನಗಳ ಪೈಕಿ 92 ಕ್ಷೇತ್ರಗಳನ್ನು ಗೆದ್ದು ಗೆದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷ ಹಲವು ವಿಶೇಷಗಳಿಂದ ಕೂಡಿದೆ. ಶನಿವಾರ ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagawanth Maan) ಅವರ ಸಚಿವ ಸಂಪುಟಕ್ಕೆ ಇಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಇದಲ್ಲದೆ ಆಪ್ ಸರ್ಕಾರದ ಅಡ್ವೊಕೇಟ್ ಜನರಲ್ (Advocate General) ನೇಮಕ ಆಗಿರುವ ಅನ್ಮೂಲ್ ರತ್ತನ್ ಸಿಧು 'ರಾಜ್ಯದ ಪರ ವಕೀಲಿಕೆ ಮಾಡಲು ಕೇವಲ ಒಂದು ರೂಪಾಯಿ ಸಂಭಾವನೆ ಪಡೆಯುತ್ತೇನೆ. ಸರ್ಕಾರದ ಕೆಲಸವನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಮಾಡುತ್ತೇನೆ. ಸರ್ಕಾರದ ಪ್ರಕರಣಗಳನ್ನು ನಿರ್ವಹಿಸುವುದಕ್ಕಾಗಿ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ' ಎಂದು ತಿಳಿಸಿದ್ದಾರೆ.
ಅತ್ಯುನ್ನತ ನಾಗರಿಕ ಗೌರವಕ್ಕೆ ಭಾಜನರಾಗಿರುವ ರತ್ತನ್ ಸಿಧು
ವಕೀಲರಾಗಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನ್ಮೋಲ್ ರತ್ತನ್ ಸಿಧು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಂದೆ ಸಾಂವಿಧಾನಿಕ, ಕ್ರಿಮಿನಲ್, ನಾಗರಿಕ, ಸೇವೆ ಮತ್ತು ಭೂಮಿ ವಿಷಯಗಳಲ್ಲಿ ಅತ್ಯಂತ ಸೂಕ್ಷ್ಮವಾದ ಸರ್ಕಾರಿ ಮತ್ತು ಖಾಸಗಿ ವಿಷಯಗಳನ್ನು ನಿರ್ವಹಿಸಿದ್ದಾರೆ. ಅವರು ಅಸಾಧಾರಣ ಸಾಮಾಜಿಕ ಸೇವೆಗಾಗಿ ಪಂಜಾಬ್‌ನ ಅತ್ಯುನ್ನತ ನಾಗರಿಕ ಗೌರವವಾದ ಪರ್ಮನ್ ಪಾತ್ರವನ್ನು ಸ್ವೀಕರಿಸಿದ್ದಾರೆ.ರತ್ತನ್ ಸಿಧು ಬಾಲ್ಯ ಮತ್ತು ಶಿಕ್ಷಣ
ಮೇ 1, 1958ರಂದು (ಕಾರ್ಮಿಕರ ದಿನ) ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್ ರತ್ತನ್ ಸಿಧು ಅವರು 1975ರಲ್ಲಿ ಚಂಡೀಗಢಕ್ಕೆ ಸ್ಥಳಾಂತರಗೊಳ್ಳುವ ಮೊದಲು ಹಳ್ಳಿಯ ಶಾಲೆಯಲ್ಲಿ ಓದಿದರು. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ವ್ಯಾಸಂಗ ಮಾಡಿದರು. 1981 ರಿಂದ 1982ರವರೆಗೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು.
ರತ್ತನ್ ಸಿಧು ವೃತ್ತಿಜೀವನ
ರತ್ತನ್ ಸಿಧು 1985 ರಲ್ಲಿ ವಕೀಲ ವೃತ್ತಿಯನ್ನು ಪ್ರವೇಶಿಸಿದರು. 1993 ರಲ್ಲಿ ಪಂಜಾಬ್‌ನ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿ 2005 ರವರೆಗೆ ಸೇರಿಕೊಂಡರು, ನಂತರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ (ಪಂಜಾಬ್ ಮತ್ತು ಹರಿಯಾಣ) ವಿವಿಧ ಪ್ರಮುಖ ರಾಜ್ಯ ವಿಷಯಗಳನ್ನು ನಿರ್ವಹಿಸಿದರು. 2007ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. 2008 ರಿಂದ 2014ರವರೆಗೆ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಇದ್ದರು.
ರತ್ತನ್ ಸಿಧು ದಾಖಲೆ
ರತ್ತನ್ ಸಿಧು ಅವರು 1997ರಿಂದ ಸತತವಾಗಿ ಐದು ಬಾರಿ ಪಂಜಾಬ್ ಮತ್ತು ಹರಿಯಾಣದ ಬಾರ್ ಕೌನ್ಸಿಲ್ ಸದಸ್ಯರಾಗಿ ಚುನಾಯಿತರಾದರು, 2001-02ರಲ್ಲಿ ವಕೀಲರ ಅಪೆಕ್ಸ್ ರೆಗ್ಯುಲೇಟಿಂಗ್ ಬಾಡಿ ಅಧ್ಯಕ್ಷರಾಗಿ ಉನ್ನತೀಕರಿಸಲ್ಪಟ್ಟರು. ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುವಾಗ ಅವರು ಎಂಟು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. ದೇಶದಲ್ಲೇ ಹೈಕೋರ್ಟ್‌ನಲ್ಲಿ ಇಷ್ಟು ಬಾರಿ ಆಯ್ಕೆಯಾದ ಮೊದಲ ವ್ಯಕ್ತಿ ರತ್ತನ್ ಸಿಧು ಅವರು.ಸಿಎಂ ಭಗವಂತ್ ಮಾನ್ ಸಂಪುಟದ ಸಚಿವರಿವರು
ಪಂಜಾಬ್ ಆಮ್ ಆದ್ಮಿ ಪಕ್ಷದ ಹತ್ತು ಶಾಸಕರು ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರುಗಳೆಂದರೆ ಡಾ. ದಲ್ಜಿತ್ ಕೌರ್, ಹರ್ಪಾಲ್ ಸಿಂಗ್ ಚೀಮಾ, ಹರ್ಭಜನ್ ಸಿಂಗ್, ಡಾ. ವಿಜಯ್ ಸಿಂಗ್ಲಾ, ಗುರ್ಮೀತ್ ಸಿಂಗ್, ಬ್ರಾಮ್ ಶಂಕರ್ ಕಟಾರುಚಕ್, ಹರ್ಜೋತ್ ಸಿಂಗ್ ಬೈನ್ಸ್, ಲಾಲ್ಜಿತ್ ಸಿಂಗ್ ಭುಲ್ಲರ್ ಮತ್ತು ಕುಲದೀಪ್ ಸಿಂಗ್ ಧಲಿವಾಲ್. ಈ ಪೈಕಿ ಇಬ್ಬರು ರೈತರು, ಮೂವರು ವಕೀಲರು, ಇಬ್ಬರು ವೈದ್ಯರು, ಓರ್ವ ಸಮಾಜ ಸೇವಕ, ಓರ್ವ ಎಂಜಿನಿಯರ್ ಮತ್ತು ಓರ್ವ ಉದ್ಯಮಿ. ಪ್ರಸ್ತುತ ಕ್ಯಾಬಿನೆಟ್ ಮಂತ್ರಿಗಳಾಗಿರುವವರು ಪಂಜಾಬಿನ ವಿವಿಧ ಭಾಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹತ್ತರಲ್ಲಿ ಐವರು ಮಾಲ್ವಾದಿಂದ, ನಾಲ್ವರು ಮಜಾದಿಂದ ಮತ್ತು ಒಬ್ಬರು ದೋಬಾ ಪ್ರದೇಶದವರಾಗಿದ್ದಾರೆ.