ನವದೆಹಲಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣವು ಕಳೆದ ಎರಡು ದಶಕಗಳಲ್ಲಿ 2.5 ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್‌ಇ) ಹೊಸ ಅಧ್ಯಯನ ವರದಿ ಹೇಳಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸಿಎಸ್‌ಇ ಅಧ್ಯಯನ ನಡೆಸಿದ 2019ರ ಪರಿಸರ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದರು.
ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮಾಲಿನ್ಯದ ಮಾಪನ ಪಿ.ಎಂ 2.5 ಇದ್ದು, ಇದು ಎರಡು ದಶಕಗಳಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಸಂಭವಿಸುವ ಪ್ರತಿ ನಾಲ್ಕು ಸಾವುಗಳಲ್ಲಿ ವಾಯುಮಾಲಿನ್ಯದಿಂದ ಒಂದು ಸಾವು ಸಂಭವಿಸುತ್ತಿದೆ ಎಂದು ವರದಿ ಹೇಳಿದೆ.
ಜಗತ್ತಿನಲ್ಲಿ ವಾಯು ಮಾಲಿನ್ಯದಿಂದ 66.70 ಲಕ್ಷ ಜನರು ಸಾವನ್ನಪ್ಪಿದ್ದು, ಅದರಲ್ಲಿ ಭಾರತದಲ್ಲಿ 16.7 ಲಕ್ಷ ಮತ್ತು ಚೀನಾದಲ್ಲಿ 18.5 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಾಯು ಮಾಲಿನ್ಯದಿಂದ ಜಗತ್ತಿನಲ್ಲಿ 2019ರಲ್ಲಿ 4.76 ಲಕ್ಷ ಶಿಶುಗಳು ಜನಿಸಿದ ಮೊದಲ ತಿಂಗಳಿನಲ್ಲಿಯೇ ಸಾವನ್ನಪ್ಪಿವೆ. ಇವುಗಳಲ್ಲಿ 1.16 ಸಾವು ಭಾರತದಲ್ಲಿ ಸಂಭವಿಸಿವೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಮನುಷ್ಯರಿಗೆ ತಾಳಿಕೊಳ್ಳಲು ಸಾಧ್ಯವಾಗದಷ್ಟು ಉಷ್ಣತೆಯ ವಾತಾವರಣ ಉಂಟಾಗಬಹುದು: ವಿಶ್ವಸಂಸ್ಥೆ ಎಚ್ಚರಿಕೆ
ಹಾನಿಕಾರಕ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸದೇ ಇದ್ದಲ್ಲಿ ಮುಂದೆ ಅದು ಮನುಷ್ಯರು ತಾಳಿಕೊಳ್ಳಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಉಷ್ಣತೆಯ ವಾತಾವರಣಕ್ಕೆ ಭಾರತ ಸಹಿತ ಕೆಲವು ದೇಶಗಳಲ್ಲಿ ಕಾರಣವಾಗಬಹುದೆಂದು ವಿಶ್ವ ಸಂಸ್ಥೆಯ ಅಂತರ-ಸರಕಾರಿ ಸಮಿತಿಯ ಹವಾಮಾನ ಬದಲಾವಣೆ ವರದಿಯಲ್ಲಿ ತಿಳಿಸಲಾಗಿದೆ.
ಹೊರಸೂಸುವಿಕೆ ಪ್ರಮಾಣ ಬಹಳಷ್ಟು ಹೆಚ್ಚಾಗಿದ್ದರೆ ಈ ಶತಮಾನದ ಮಧ್ಯಭಾಗದಲ್ಲಿ ಭಾರತದ ಸುಮಾರು 3.5 ಕೋಟಿ ಜನರು ಕರಾವಳಿ ಭಾಗಗಳಲ್ಲಿ ನೆರೆಯಿಂದ ಸಮಸ್ಯೆಗೀಡಾಗಲಿದ್ದರೆ ಶತಮಾನದ ಅಂತ್ಯದ ವೇಳೆಗೆ 4.5 ಕೋಟಿಯಿಂದ 5 ಕೋಟಿಯಷ್ಟು ಜನರು ಪ್ರವಾಹಗಳಿಂದ ಬಹಳಷ್ಟು ಸಮಸ್ಯೆ ಎದುರಿಸಲಿದ್ದಾರೆ ಎಂದು ವರದಿ ಎಚ್ಚರಿಸಿದೆ.
ಇತರ ಪ್ರದೇಶಗಳಿಗೆ ಹೋಲಿಸಿದಾಗ ನಗರ ಪ್ರದೇಶದ ಅಂದಾಜು 87.7 ಕೋಟಿ ಜನರು 2050ರ ವೇಳೆಗೆ ಅಪಾಯದಲ್ಲಿರಲಿದ್ದಾರೆ ಹಾಗೂ ಈ ಸಂಖ್ಯೆ 2020ರಲ್ಲಿದ್ದ 48 ಕೋಟಿಯ ದ್ವಿಗುಣವಾಗಿದೆ ಎಂದು ವರದಿ ಹೇಳಿದೆ.
ತಾಪಮಾನವು ಒಂದು ಡಿಗ್ರಿ ಸೆಲ್ಸಿಯಸ್‍ನಿಂದ 4 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾದಲ್ಲಿ ಭಾರತದಲ್ಲಿ ಭತ್ತದ ಇಳುವರಿ ಶೇ 10ರಿಂದ ಶೇ 30ರಷ್ಟು, ಜೋಳದ ಇಳುವರಿ ಶೇ. 25ರಿಂದ ಶೇ. 70ರಷ್ಟು ಇಳಿಕೆಯಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮುಂದಿನ ಎರಡು ದಶಕಗಳಲ್ಲಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿ ಕಾರಣವಾಗಿ ತಪ್ಪಿಸಲು ಸಾಧ್ಯವಾಗದ ಹಾನಿಗಳನ್ನುಂಟು ಮಾಡಬಹುದು ಎಂದು ತನ್ನ ಆರನೇ ಮೌಲ್ಯಮಾಪನ ವರದಿಯ ಆರನೇ ಭಾಗದಲ್ಲಿ ಸಮಿತಿ ತಿಳಿಸಿದೆ.
2010 ಹಾಗೂ 2020ರ ನಡುವೆ ಆಫ್ರಿಕಾ, ದಕ್ಷಿಣ ಏಷ್ಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಸಹಿತ ಹಲವು ಕಡೆಗಳಲ್ಲಿ ಪ್ರವಾಹ, ಬರ ಮತ್ತು ಬಿರುಗಾಳಿಗಳಂತಹ ಪ್ರಾಕೃತಿಕ ವಿಕೋಪಗಳಿಂದ 15 ಪಟ್ಟು ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.