ನವದೆಹಲಿ: ರೊಮೇನಿಯಾದ ಸುಸೇವಾದಿಂದ ಮಂಗಳವಾರ ಎರಡು ನಾಗರಿಕ ವಿಮಾನಗಳಲ್ಲಿ 410 ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ರಷ್ಯಾದ ಸೇನಾ ದಾಳಿಯಿಂದಾಗಿ ಫೆಬ್ರವರಿ 24 ರಿಂದ ಉಕ್ರೇನ್ ನ ವಾಯುಪ್ರದೇಶವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರು ನೆರೆಯ ದೇಶಗಳ ಗಡಿ ತಲುಪಿದ ನಂತರ ಅವರನ್ನು ಅಲ್ಲಿಂದ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ ತಲುಪಿದ ನಂತರ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.
"ಉಕ್ರೇನ್‌ನ ನೆರೆಯ ದೇಶಗಳಿಂದ ಭಾರತೀಯ ನಾಗರಿಕರನ್ನು ರಕ್ಷಿಸಲು ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಅಡಿಯಲ್ಲಿ 410 ಭಾರತೀಯರನ್ನು ಇಂದು(ಮಾರ್ಚ್ 8) ಸುಸೇವಾದಿಂದ 2 ವಿಶೇಷ ನಾಗರಿಕ ವಿಮಾನಗಳ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ" ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.