ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ(ಬ್ರೆಂಟ್ ಕಚ್ಚಾ) ಬೆಲೆ ಗುರುವಾರ ಪ್ರತಿ ಬ್ಯಾರೆಲ್‌ಗೆ 115 ಡಾಲರ್ ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ.
ಕಳೆದ 120 ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ ಕಚ್ಚಾ ತೈಲದ ಬೆಲೆ ಸುಮಾರು ಶೇ 70 ರಷ್ಟು ಹೆಚ್ಚಾಗಿದೆ. ಹೀಗಾಗಿ ಮುಂದಿನ ವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 20 ರಿಂದ 25 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.
ಮೋದಿ ಸರ್ಕಾರವು ವಿಧಾನಸಭಾ ಚುನಾವಣೆಗೆ ಮುಂಚೆಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಳ ಮಾಡಿರಲಿಲ್ಲ. ಆದರೆ, ಚುನಾವಣೆ ಮುಗಿದ ಮೇಲೆ ಬೆಲೆ ಏರಿಕೆ ಮಾಡಲು ವಿಳಂಬ ಮಾಡುವುದಿಲ್ಲ. ಸದ್ಯ ದೇಶದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದರ ಫಲಿತಾಂಶ ಮಾರ್ಚ್ 10 ರಂದು ಬರಲಿದೆ. ಹೀಗಾಗಿ ಮುಂದಿನ ವಾರದಿಂದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಒಂದೇ ಬಾರಿಗೆ ಆಗುವುದಿಲ್ಲ. ಆದರೆ ಪ್ರತಿದಿನ ಏರಿಕೆ ಕಾಣಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪೆಟ್ರೋಲ್-ಡೀಸೆಲ್ ಬೆಲೆ 20-25 ರೂ.ಗಳಷ್ಟು ಹೆಚ್ಚಳ?
ಐಐಎಫ್ಎಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಅನುಜ್ ಗುಪ್ತಾ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $115 ದಾಟಿದೆ. ಇನ್ನೊಂದೆಡೆ ತೈಲ ಕಂಪನಿಗಳು ನವೆಂಬರ್ 3ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಅಂದಿನಿಂದ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಗೆ $40 ಕ್ಕಿಂತ ಹೆಚ್ಚು ದುಬಾರಿಯಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 20-25 ರೂ.ವರೆಗೆ ಹೆಚ್ಚಾಗಬಹುದು ಎಂದಿದ್ದಾರೆ.