ನವದೆಹಲಿ: ದೇಶದಲ್ಲಿ ಖಾಲಿಯಿರುವ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಭರ್ತಿಗೆ ನೀಟ್- ಪಿಜಿ 2021ರ ಎಲ್ಲಾ ಕೆಟಗರಿಯಲ್ಲಿ ಕಟ್ ಆಫ್ ಅಂಕಗಳನ್ನು ಶೇಕಡಾ 15 ರಷ್ಟು ಇಳಿಕೆ ಮಾಡುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಕೇಂದ್ರ ಸರ್ಕಾರ ಶನಿವಾರ ನಿರ್ದೇಶಿಸಿದೆ.
ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದೊಂದಿಗೆ ಚರ್ಚೆ, ಸಮಾಲೋಚನೆ ನಡೆಸಿದ ಬಳಿಕ ಎಲ್ಲಾ ಕೆಟಗರಿಯಲ್ಲಿ ಶೇಕಡಾ 15 ರಷ್ಟು ಅಂಕ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸದಸ್ಯ ಕಾರ್ಯದರ್ಶಿ ಬಿ. ಶ್ರೀನಿವಾಸ್, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ಕಾರ್ಯಕಾರಿ ನಿರ್ದೇಶಕ ಮಿನು ಬಾಜ್ ಪೈ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇದರಿಂದಾಗಿ ಸಾಮಾನ್ಯ ಅಭ್ಯರ್ಥಿಗಳ ಪ್ರವೇಶಕ್ಕೆ ಶೇ.35, ಜನರಲ್ (ವಿಶೇಷ ಚೇತನರಿಗೆ) ಶೇ. 30 ಮತ್ತು ಎಸ್ ಸಿ, ಎಸ್ ಟಿ , ಒಬಿಸಿಗೆ ಶೇ. 25 ರಷ್ಟು ಅಂಕ ಇಳಿಕೆ ಮಾಡುವ ಸಾಧ್ಯತೆಯಿದೆ.
ಈ ನಿರ್ಧಾರದಿಂದಾಗಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿ, ಅದಷ್ಟ ಬೇಗ ಹೊಸ ಅರ್ಹ ಅಭ್ಯರ್ಥಿಗಳ ಪರಿಷ್ಕೃತ ಫಲಿತಾಂಶದ ಮಾಹಿತಿಯನ್ನು ಅಧಿಕೃತ ಕಚೇರಿಗೆ ಕಳುಹಿಸುವಂತೆ ಶ್ರೀನಿವಾಸ್ ಸೂಚಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಎರಡು ಸುತ್ತು ಮತ್ತು ರಾಜ್ಯ ಕೋಟಾ ಕೌನ್ಸೆಲಿಂಗ್ ನ ಎರಡು ಸುತ್ತುಗಳು ಪೂರ್ಣಗೊಂಡ ನಂತರವೂ ಸುಮಾರು 8. ಸಾವಿರ ಸೀಟುಗಳು ಖಾಲಿಯಿರುವುದಾಗಿ ಅವರು ತಿಳಿಸಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ನಡೆಸಲಾಗುತ್ತದೆ. ಅಖಿಲ ವೈದ್ಯಕೀಯ ಅಸೋಸಿಯೇಷನ್ ಒಕ್ಕೂಟ( ಫೈಮಾ) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಇದರಿಂದ ಖಾಲಿಯಿರುವ ಸೀಟುಗಳ ಭರ್ತಿಗೆ ನೆರವಾಗಲಿದೆ ಎಂದು ಹೇಳಿದೆ.
ಈ ಬಾರಿ ಕೋವಿಡ್ ಕಾರಣದಿಂದಾಗಿ ಎರಡು ಬಾರಿ ಪರೀಕ್ಷೆ ತಡವಾಯಿತು. ಕೋವಿಡ್ ಮತ್ತು ಕೋರ್ಟ್ ಕೇಸ್ ಕಾರಣದಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಕೂಡ ತಡವಾಯಿತು. 2021ರ ಬ್ಯಾಚಿನ ಆಡ್ಮಿಷನ್ 2022ರಲ್ಲಿ ನಡೆಯುತ್ತಿದ್ದು, ಸಾವಿರಾರು ಸೀಟುಗಳು ಖಾಲಿಯಿವೆ. ಕಟ್ ಆಫ್ ಅಂಕ ಇಳಿಕೆಯ ಅಗತ್ಯವಿತ್ತು ಎಂದು ಫೈಮಾ ಅಧ್ಯಕ್ಷ ಡಾ. ರೋಹನ್ ಕೃಷ್ಣನ್ ಹೇಳಿದ್ದಾರೆ. ಈ ಹಿಂದೆ ನೀಟ್- ಯುಜಿ 2022 ಪರೀಕ್ಷೆಗೆ ಹಾಜರಾಗುವ ಗರಿಷ್ಠ ವಯೋಮಿತಿಯನ್ನು ಎನ್ ಎಂಸಿ ರದ್ದುಗೊಳಿಸಿತ್ತು.