ಬೆಂಗಳೂರು: ಆರೋಗ್ಯ ವಿಮೆ ಕ್ಲೇಮ್‌ಗಳ ಪ್ರಮಾಣದಲ್ಲಿ 2021ರಲ್ಲಿ ಮೂರೂವರೆ ಪಟ್ಟು ಹೆಚ್ಚಳ ಆಗಿದೆ ಎಂದು ಡಿಜಿಟ್ ಇನ್ಶುರೆನ್ಸ್ ಕಂಪನಿ ಹೇಳಿದೆ.
2020ರ ಅಂಕಿ-ಅಂಶಗಳನ್ನು 2021ರ ಅಂಕಿ-ಅಂಶಗಳ ಜೊತೆ ಹೋಲಿಕೆ ಮಾಡಿ ಈ ಮಾಹಿತಿ ನೀಡಿರುವುದಾಗಿ ಕಂಪನಿ ಹೇಳಿದೆ.
2020ರ ಮಾರ್ಚ್ ನಂತರದಲ್ಲಿ ದೇಶದಲ್ಲಿ ಕೋವಿಡ್ ತೀವ್ರ ಗತಿಯಲ್ಲಿ ಹರಡಿತು. 'ಕೋವಿಡ್‌ನ ಎರಡನೆಯ ಅಲೆಯ ಸಂದರ್ಭದಲ್ಲಿ ಕೊರೊನ ವೈರಾಣುವಿನ ಡೆಲ್ಟಾ ರೂಪಾಂತರಿ ತಳಿಯು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತು. ಇದರಿಂದಾಗಿ 2021ರಲ್ಲಿ ಆರೋಗ್ಯ ವಿಮಾ ಕ್ಲೇಮ್‌ಗಳ ಒಟ್ಟು ಪ್ರಮಾಣವು 2020ಕ್ಕಿಂತ ಜಾಸ್ತಿ ಆಯಿತು' ಎಂದು ಕಂಪನಿಯು ಹೇಳಿದೆ.
2021ರಲ್ಲಿ ಕ್ಲೇಮ್‌ಗಳ ಪ್ರಮಾಣವು ಹೆಚ್ಚಳ ಕಂಡಿರುವುದು ಆರೋಗ್ಯ ವಿಮೆ ಉತ್ಪನ್ನಗಳ ಬಗ್ಗೆ ಅರಿವು ಜಾಸ್ತಿ ಆಗಿರುವುದನ್ನೂ ತೋರಿಸುತ್ತಿದೆ. ಸಣ್ಣ ನಗರಗಳಲ್ಲಿಯೂ ಕ್ಲೇಮ್‌ಗಳ ಸಂಖ್ಯೆ ಹೆಚ್ಚಳ ಆಗಿರುವುದು ಸಾಂಕ್ರಾಮಿಕದ ಪರಿಣಾಮವನ್ನು ಕೂಡ ತೋರಿಸುತ್ತಿದೆ ಎಂದು ಕಂಪನಿಯ ನೇರ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್ ಚತುರ್ವೇದಿ ಹೇಳಿದ್ದಾರೆ.
2021ರಲ್ಲಿ ಕ್ಲೇಮ್ ಸಲ್ಲಿಸಿದವರ ಪೈಕಿ ಹೆಚ್ಚಿನ ಜನರ ವಯಸ್ಸು 25-35 ವರ್ಷ ಹಾಗೂ 36-45 ವರ್ಷದ ನಡುವಿನದು ಎಂದು ಕಂಪನಿಯ ವರದಿ ಹೇಳಿದೆ.
'ಮಹಿಳೆಯರು ಆರೋಗ್ಯ ವಿಮೆ ಪಡೆದುಕೊಳ್ಳುತ್ತಿರುವುದು ನಿಧಾನವಾಗಿ ಹೆಚ್ಚಳ ಆಗುತ್ತಿದೆ. ಮಹಿಳೆಯರಲ್ಲಿ ಆರೋಗ್ಯ ವಿಮೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕಿದೆ' ಎಂದು ಚತುರ್ವೇದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.