ಹೈದರಾಬಾದ್: ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ಸಂರಕ್ಷಣಾ(ಎಟಿಪಿ) ವ್ಯವಸ್ಥೆಯಾದ 'ಕವಚ್' ಅನ್ನು 2022-23ರ ಆರ್ಥಿಕ ವರ್ಷದಲ್ಲಿ 2,000 ಕಿ.ಮೀ.ವರೆಗೆ ಅಳವಡಿಸಲಾಗುವುದು ಮತ್ತು ನಂತರ ಪ್ರತಿ ವರ್ಷ 4,000 ರಿಂದ 5,000 ಕಿ.ಮೀ.ವರೆಗೆ ಅದನ್ನು ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಹೇಳಿದ್ದಾರೆ.
'ಕವಚ ಅಕ್ಷರಶಃ ರಕ್ಷಾಕವಚವಾಗಿದ್ದು, ವಿಶ್ವದ ಅತ್ಯಂತ ಅಗ್ಗದ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದ್ದು, ಇದು ರೈಲುಗಳ ಮುಖಾಮುಖಿ ಡಿಕ್ಕಿಯನ್ನು ತಪ್ಪಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಚಾರ ಮಾಡುತ್ತಿದೆ.
ಆತ್ಮನಿರ್ಭರ್ ಭಾರತ್ ನ ಭಾಗವಾಗಿ 2022 ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆ ಘೋಷಿಸಲಾಗಿದೆ. 2022-23 ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿಮೀ ರೈಲು ಮಾರ್ಗವನ್ನು 'ಕವಚ್' ಅಡಿಯಲ್ಲಿ ತರಲು ಯೋಜಿಸಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ಬಜೆಟ್‌ನಲ್ಲಿ 2,000 ಕಿ.ಮೀ.ಗೆ ಅನುಮೋದನೆ ನೀಡಲಾಗಿದ್ದು, ನಂತರದ ವರ್ಷಗಳಲ್ಲಿ ಪ್ರತಿ ವರ್ಷ 4,000-5,000 ಕಿ.ಮೀ.ರೈಲು ಮಾರ್ಗದಲ್ಲಿ ಕವಚವನ್ನು ಅಳವಡಿಸಲಾಗುವುದು ಎಂದು ವೈಷ್ಣವ್ ಅವರು ಸಿಕಂದರಾಬಾದ್ ವಿಭಾಗದ ಲಿಂಗಂಪಲ್ಲಿ-ವಿಕಾರಾಬಾದ್ ನಡುವಿನ ‘ಕವಚ್’ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಭಾರತೀಯ ರೈಲ್ವೆ ತನ್ನದೇ ಆದ 'ಕವಚ್' ಎಂದು ಕರೆಯಲ್ಪಡುವ ಸ್ಥಳೀಯ ಸ್ವಯಂಚಾಲಿತ ರೈಲು ಸಂರಕ್ಷಣಾ(ಎಟಿಪಿ) ವ್ಯವಸ್ಥೆಯನ್ನು ಇಂದು ಪರೀಕ್ಷಿಸಲಾಯಿತು. ಇದನ್ನು ವಿಶ್ವದ ಅತ್ಯಂತ ಅಗ್ಗದ ಸ್ವಯಂಚಾಲಿತ ರೈಲು ಅಪಘಾತ ತಡೆಯುವ ವ್ಯವಸ್ಥೆ ಎಂದು ರೈಲ್ವೇಯಿಂದ ಪ್ರಚಾರ ನೀಡಲಾಗುತ್ತಿದೆ. ಇಂದು ಸಿಕಂದರಾಬಾದ್(Secunderabad) ಬಳಿ ಎರಡು ರೈಲುಗಳನ್ನು ಪರಸ್ಪರ ವಿರುದ್ಧ ದಿಕ್ಕಿನತ್ತ ವೇಗವಾಗಿ ಚಲಿಸಲು ಬಿಟ್ಟು ಈ ರಕ್ಷ ಕವಚವನ್ನು ಪರೀಕ್ಷಿಸಲಾಯಿತು, ಒಂದು ರೈಲಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇದ್ದರೆ ಮತ್ತೊಂದು ರೈಲಿನಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರಿದ್ದರು. ಆದರೆ ಈ ಸ್ವದೇಶಿ ನಿರ್ಮಿತ ಕವಚ ತಂತ್ರಜ್ಞಾನದ ಪರಿಣಾಮ ಈ ರೈಲುಗಳು ಅಪಘಾತಕ್ಕೀಡಾಗಲಿಲ್ಲ.