ಮನುಷ್ಯನ ಜೀವನಕ್ಕೆ ನಿದ್ರೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಡುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ನಿದ್ರಾ ದಿನ ಆಚರಣೆ ಮಾಡಲಾಗುವುದು. ಈ ವರ್ಷ ಅದನ್ನು ಮಾರ್ಚ್ 18ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ.
ಒಬ್ಬ ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 7-8ಗಂಟೆಗಳ ನಿದ್ದೆಯ ಅಗತ್ಯವಿದೆ, ಅದಕ್ಕಿಂತ ಹೆಚ್ಚಾದರೂ, ಕಡಿಮೆಯಾದರೂ ಸಮಸ್ಯೆಯೇ. ಇದರಿಂದ ದೈಹಿಕ, ಮಾನಸಿಕ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದಕ್ಕಾಗಿಯೇ ಈ ನಿದ್ದೆಯ ಪ್ರಾಮುಖ್ಯತೆಯನ್ನು ಜನರಿಗೆ ಅರಿವು ಮಾಡಿ ಕೊಡಲು ಈ ದಿನವನ್ನು ಜಾಗೃತ ದಿನವನ್ನಾಗಿ ಆಚರಣೆ ಮಾಡಲಾಗುವುದು. ಈ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ.
ವಿಶ್ವ ನಿದ್ರಾ ದಿನದ ಇತಿಹಾಸ:
ಜನರಿಗೆ ನಿದ್ರೆಯ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಸೇವಾ ಸಮಾಜದ ನಿಷ್ಠಾವಂತ ಆರೋಗ್ಯ ತಜ್ಞರು ಮತ್ತು ವ್ಯಕ್ತಿಗಳ ಗುಂಪೊಂದು ವಿಶ್ವ ನಿದ್ರಾ ದಿನದ ವಾರ್ಷಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇದನ್ನು ಮೊದಲಿಗೆ 2008ರಲ್ಲಿ ಆಚರಿಸಲಾಯಿತು. ಅಂದಿನಿಂದ ವರ್ಲ್ಡ್ ಸ್ಲೀಪ್ ಸೊಸೈಟಿ ಪ್ರತಿ ವರ್ಷ ಜಾಗತಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತದೆ.
ವಿಶ್ವ ನಿದ್ರಾ ದಿನದ ಆಚರಣೆ:
ವರ್ಲ್ಡ್ ಸ್ಲೀಪ್ ಸೊಸೈಟಿಯ ವರ್ಲ್ಡ್ ಸ್ಲೀಪ್ ಡೇ ಕಮಿಟಿಯು ಸ್ಲೀಪಿಂಗ್ ಸೈಕಲ್‌ಗೆ ಸಂಬಂಧಿಸಿದ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಪ್ರಪಂಚದ ವಿವಿಧ ಭಾಗಗಳಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ವಾರ್ಷಿಕ ಸಮಾರಂಭದಲ್ಲಿ, ಆರೋಗ್ಯ ತಜ್ಞರು ನಿದ್ರೆಯ ಅಸ್ವಸ್ಥತೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.
2022ರ ವಿಶ್ವ ನಿದ್ರಾ ದಿನದ ಥೀಮ್:
ವಿಶ್ವ ನಿದ್ರಾ ದಿನ 2022 ರ ಥೀಮ್ 'ಗುಣಮಟ್ಟದ ನಿದ್ರೆ, ಸೌಂಡ್ ಮೈಂಡ್, ಹ್ಯಾಪಿ ವರ್ಲ್ಡ್' ಆಗಿದೆ. ಈ ಥೀಮ್ ನಿದ್ರೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಜನರು ಕನಿಷ್ಠ 7-8 ಗಂಟೆಗಳ ನಿದ್ದೆಯನ್ನು ಹೊಂದಿರುವುದು ಮುಖ್ಯ, ಇದರಿಂದ ಅವರ ದೇಹವು ಚೇತರಿಸಿಕೊಳ್ಳುತ್ತದೆ ಮತ್ತು ಬಿಡುವಿಲ್ಲದ ದಿನದ ಒತ್ತಡದಿಂದ ಮನಸ್ಸು ಸಡಿಲಗೊಳ್ಳುತ್ತದೆ.
ಉತ್ತಮ ರಾತ್ರಿಯ ನಿದ್ರೆಯು ದೇಹವು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಸ್ಥೂಲಕಾಯತೆಯಿಂದ ದೂರವಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಹಾಯಾಗಿ ನಿದ್ರಿಸಲು ಒಂದಿಷ್ಟು ಟಿಪ್ಸ್:
-- ರಾತ್ರಿ ನಿದ್ದೆ ಸರಿಯಾಗಿ ಬರದಿದ್ದರೆ ಮಲಗುವ ಮುಂಚೆ ಬಿಸಿ ನೀರಿನಲ್ಲಿ 15 ನಿಮಿಷ ಕಾಲು ಅದ್ದಿ ರಿಲ್ಯಾಕ್ಸ್ ಆಗಿ ನಂತರ ಮಲಗಿದರೆ ತಕ್ಷಣವೇ ನಿದ್ದೆ ಬರುತ್ತದೆ.
- ನಿದ್ದೆ ತರುವ ಆಹಾರಗಳಾದ ವಾಲ್‌ನಟ್ಸ್, ಬಾದಾಮಿ, ಚೆರ್ರಿ, ಚಮೊಮೈಲ್ ಟೀ, ಕಿವಿ ಹಣ್ಣು, ಅನ್ನ, ಕಾಟೇಜ್ ಚೀಸ್, ಬಾಳೆಹಣ್ಣು, ಹಾಲನ್ನು ಮಲಗುವ ಮುನ್ನ ಸೇವಿಸಿ.
- ನಿದ್ರಾಹೀನತೆಗೆ ಕಾರಣವಾಗುವ ಕಾಫಿ/ಟೀ, ಅಧಿಕ ಖಾರವಿರುವ ಆಹಾರ, ಮದ್ಯ, ಅಧಿಕ ನೀರಿನಂಶವಿರುವ ಆಹಾರ, ಸ್ಯಾಚುರೇಟಡ್ ಆಹಾರ, ಅತ್ಯಧಿಕ ಪ್ರೊಟೀನ್ ಇರುವ ಆಹಾರವನ್ನು ರಾತ್ರಿ ಸೇವಿಸಬೇಡಿ.