ಪೆರ್ಲ: ಎಳವೆಯಲ್ಲಿ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಮಾರಾಟ ಮಾಡುತ್ತಾ ಅಧ್ಯಯನ ನಡೆಸಿದ ಬಡ ಕುಟುಂಬದ ಸಾಧಾರಣ ವಿದ್ಯಾರ್ಥಿಯೊಬ್ಬ ಬೆಳೆದು ದೊಡ್ಡವನಾದಾಗ ವಿಜ್ಞಾನಿಯಾಗಿ, ಭಾರತದ ಮಿಸೈಲ್ ಮ್ಯಾನ್ ಹಾಗೂ ಕೊನೆಗೆ ಭಾರತದ ರಾಷ್ಟ್ರಪತಿಯಾಗಿ ದೇಶಕ್ಕೆ ಬಲು ದೊಡ್ಡ ಕೊಡುಗೆ ನೀಡಿದ್ದಾರೆ ಎಂದಾದರೆ ಅದು ಅವರ ಎಳವೆಯಿಂದಲೇ ಮೈಗೂಡಿಸಿದ್ದ ಗುರಿ ಸಾಧನೆಯ ತುಡಿತ, ಅವಿರತ ಪರಿಶ್ರಮ, ಹೊಸತನ್ನು ಕಲಿಯ ಬೇಕೆಂಬ ಹಂಬಲದಿಂದಾಗಿದೆ ಎಂದು ಅಂಕಣಗಾರ ಆದರ್ಶ ಗೋಖಲೆ ಹೇಳಿದರು.
ಪೆರ್ಲ ನಾಲಂದ ಕಾಲೇಜು 'ಜ್ವಲನ್ -2022' ಯೂನಿಯನ್ ಮತ್ತು ಫೈನ್ ಆಟ್ರ್ಸ್ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.
ಭಾರತದ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪ್ರಕಾರ ಮಲಗಿದ ನಂತರ ಕಾಣುವ ಕನಸುಗಳು ಕನಸುಗಳಲ್ಲ.ಕನಸುಗಳು ನಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ.ಸಾಧನೆಯ ತುಡಿತ ನಮ್ಮನ್ನು ನಿದ್ದೆ ಮಾಡಲು ಬಿಡದೆ ಮತ್ತಷ್ಟು ಕ್ರಿಯಾಶೀಲರನ್ನಾಗಿ ಮಾಡುವುದು. ಡಾ.ಕಲಾಂ ಅವರಿಗೆ ಈ ಯಶಸ್ಸು ಅಷ್ಟು ಸುಲಭವಾಗಿ ಸಿಗಲಿಲ್ಲ. ಅದರ ಹಿಂದೆ ದೊಡ್ಡ ಹೋರಾಟದ ಫಲ ಅಡಗಿದೆ. ಭಾರತ ದೇಶವನ್ನು ತನ್ನ ಹೆಗಲ ಮೇಲೆ ಎತ್ತಿ ಇಂದು ಈ ಹಂತಕ್ಕೆ ಬೆಳೆಸಿದ ಅಬ್ದುಲ್ ಕಲಾಂ ಅವರಿಂದಾಗಿ ಭಾರತ ಇಂದು ಘಟಾನುಘಟಿ ದೇಶಗಳೊಂದಿಗೆ ಸ್ರ್ಪಸಲು ಸಾಧ್ಯವಾಗಿದೆ.ಯಾವುದೇ ದೇಶದ ಮೌಲ್ಯವನ್ನು ಅದರ ತಂತ್ರಜ್ಞಾನದಿಂದ ಮಾತ್ರ ನೋಡಲಾಗುತ್ತದೆ. ಅಬ್ದುಲ್ ಕಲಾಂ ಅವರು ಭಾರತಕ್ಕೆ ತಂತ್ರಜ್ಞಾನ, ಕ್ಷಿಪಣಿ, ಪರಮಾಣು ಶಸ್ತ್ರಾಸ್ತ್ರಗಳನ್ನು ನೀಡಿದರು. ಅವರಿಂದಾಗಿ ಭಾರತ ಇಂದು ಪರಮಾಣು ಶ್ರೀಮಂತ ರಾಷ್ಟ್ರವಾಗಿದೆ. ಯಶಸ್ಸಿಗೆ ಶೋರ್ಟ್ ಕಟ್ ಅನ್ನುವದ್ದಿಲ್ಲ. ಪ್ರತಿಯೊಂದು ಕೆಲಸದಲ್ಲೂ ಆತ್ಮ ವಿಶ್ವಾಸ, ಗುರಿ ಸಾಧನೆಯ ತುಡಿತ ಸತತ ಪ್ರಯತ್ನದಿಂದ ಜೀವನದಲ್ಲಿ ಹೊಸ ಆಯಾಮವನ್ನೇ ಕಂಡುಕೊಳ್ಳಬಹುದು ಎಂದರು.
ಯುಎಇ ಎಕ್ಸ್ಚೇಂಜ್ ಮಾಜಿ ಅಧ್ಯಕ್ಷ, ಕಾಲೇಜು ಆಡಳಿತ ಮಂಡಳಿ ಸದಸ್ಯ ವೈ.ಸುಧೀರ್ ಕುಮಾರ್ ಶೆಟ್ಟಿ ಸಭಾ ಕಾರ್ಯಕ್ರಮ ಹಾಗೂ ಫೈನ್ ಆಟ್ರ್ಸ್ ಉದ್ಘಾಟಿಸಿದರು. ಅವರು ಮಾತನಾಡಿ, ಹೆಚ್ಚು ಭಾಷೆಗಳನ್ನು ಕಲಿಯುವ ತುಡಿತ ನಮ್ಮಲ್ಲಿರಬೇಕು. ಭಾಷೆಗಳ ಅರಿವಿದ್ದಲ್ಲಿ ಜ್ಞಾನದ ಬಾಗಿಲಿನ ಮೂಲಕ ಎಲ್ಲಿಗೆ ಬೇಕಾದರೂ ಸುಲಭವಾಗಿ ಪ್ರವೇಶಿಸಬಹುದು. ಸಂಬಂಧಗಳ ಬೆಳವಣಿಗೆಗೂ ಭಾಷೆ ಪೂರಕ. ಸಮಾಜಕ್ಕಾಗಿ ಏನಾದರೂ ತ್ಯಾಗ ಮಾಡುವ ಮನಸ್ಥಿತಿ ನಮ್ಮದಾಗಿರಬೇಕು. ಶ್ರದ್ಧೆ, ಪ್ರಾಮಾಣಿಕತೆ, ಶ್ರಮ, ವಿವೇಕತೆಯಿಂದ ಸಮಾಜದಲ್ಲಿ ಮಾನ್ಯತೆ ಸಿಗುವುದು ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ರೈ ಶೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಫಲತೆಗಳಿಂದ ಪಾಠ ಕಲಿಯುವ ಮೂಲಕ ಅವಿರತ ಪ್ರಯತ್ನ ನಮ್ಮದಾಗಿದ್ದಲ್ಲಿ ಜೀವನದಲ್ಲಿ ಸಫಲರಾಗಬಹುದು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ್ ಅಮೈ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಯೂನಿಯನ್ ಅಧ್ಯಕ್ಷೆ ಅಂಕಿತಾ ಬಿ.ಸಿ.ಸನ್ಮಾನ ಪತ್ರ ಓದಿದರು.ಕಾಲೇಜು ಯೂನಿಯನ್ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅಮೈ ಅವರು ಮಾತನಾಡಿ, ಹೊಟ್ಟೆಪಾಡಿಗಾಗಿ ಬೆವರು ಹರಿಸಿದ್ದೇನೆಯೇ ಹೊರತು ಪ್ರಶಸ್ತಿ ಪುರಸ್ಕಾರಗಳಿಗಾಗಿ ದುಡಿದಿಲ್ಲ.ಪದ್ಮಶ್ರೀ ಪ್ರಶಸ್ತಿ ಇಡೀ ದೇಶಕ್ಕೆ ಸಂದ ಗೌರವವೇ ಹೊರತು ವೈಯುಕ್ತಿಕವಲ್ಲ ಎಂದರು.
ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾಲೇಜು ಯೂನಿಯನ್ ಅಧ್ಯಕ್ಷೆ ಅಂಕಿತಾ ಬಿ.ಸಿ.ಸ್ವಾಗತಿಸಿ, ಕಾರ್ಯದರ್ಶಿ ಮನೋಹರ ಪ್ರಸಾದ್ ಪಿ. ವಂದಿಸಿದರು.ದಿವಾಕರ ಉಪ್ಪಳ ನಿರೂಪಿಸಿದರು.ಮಧ್ಯಾಹ್ನ ಡಿಜೆ ರಘು ಮಂಗಳೂರು ತಂಡದ ರಿಮಿಕ್ಸ್ ಲೈವ್ ಕಾರ್ಯಕ್ರಮ ನಡೆಯಿತು.