ನವದೆಹಲಿ: ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಪರಾಮರ್ಶೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆದ ನಂತರ ಇದೀಗ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತು ಇತರ ಜಿ-23 ಗುಂಪಿನ ಸದಸ್ಯರು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಸದ್ಯದಲ್ಲಿಯೇ ಭೇಟಿ ಮಾಡಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಗಳ ಜೊತೆಗಿ ಭೇಟಿ-ಮಾತುಕತೆ ಯಾವಾಗ ಎಂದು ಸಮಯ, ದಿನ ಇನ್ನೂ ನಿರ್ಧಾರವಾಗಿಲ್ಲ. ಸೋನಿಯಾ ಗಾಂಧಿಯವರ ಜೊತೆ ಮಾತನಾಡಿ ಜಿ-23 ನಾಯಕರ ಭೇಟಿಯ ಸಮಯ ನಿಗದಿಪಡಿಸಲಾಗುವುದು ಎಂದು ರಾಹುಲ್ ಗಾಂಧಿಯವರು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆ ಗುಲಾಂ ನಬಿ ಆಜಾದ್ ಮಾತ್ರ ಹೈಕಮಾಂಡ್ ಭೇಟಿ ಮಾಡುವುದು ಎಂದು ಹೇಳಲಾಗುತ್ತಿತ್ತು.
ದೇಶದ ಅತಿದೊಡ್ಡ ಹಳೆಯ ಪಕ್ಷವಾದ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಚುನಾವಣೆಗಳಲ್ಲಿ ಸೋಲು ಕಾಣುತ್ತಿದ್ದು, ಇದರಿಂದ ಹೊರಬರಲು ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಒತ್ತಾಯಿಸುತ್ತಿರುವ ಜಿ-23 ನಾಯಕರು ಮೊನ್ನೆ ಬುಧವಾರ ಸಭೆ ಸೇರಿ ಪಂಚರಾಜ್ಯಗಳ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದ್ದರು. ಪಕ್ಷದ ನಾಯಕರಾದ ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ, ಮನೀಶ್ ತಿವಾರಿ, ಶಶಿ ತರೂರ್, ಮಣಿಶಂಕರ್ ಅಯ್ಯರ್, ಪಿಜೆ ಕುರಿಯನ್, ಪ್ರೀನೀತ್ ಕೌರ್, ಸಂದೀಪ್ ದೀಕ್ಷಿತ್ ಮತ್ತು ರಾಜ್ ಬಬ್ಬರ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ನಿನ್ನೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಜಿ 23 ನಾಯಕ ಹೂಡಾ, ದೆಹಲಿಯಲ್ಲಿ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಚುನಾವಣಾ ಸೋಲಿನ ಕುರಿತು ಜಿ-23 ಬಣದ ಸಭೆಯ ನಂತರ ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡಿದ್ದರು.
ಜಿ-23 ನಾಯಕರ ಸಭೆ ಮತ್ತು ಅವರ ನಿರ್ಣಯದ ಬಗ್ಗೆ ರಾಹುಲ್ ಗಾಂಧಿ ಹೂಡಾ ಅವರನ್ನು ಕೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾವಣೆಗಳು ಮತ್ತು ಭವಿಷ್ಯದ ನಿರ್ಧಾರಗಳನ್ನು ಸಿಡಬ್ಲ್ಯೂಸಿಯಲ್ಲಿ ಮಾತ್ರ ಚರ್ಚಿಸುವ ಮೂಲಕ ತೆಗೆದುಕೊಳ್ಳುವಂತೆ ಹೂಡಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ನಂತರ ಹೂಡಾ ಅವರು ರಾಹುಲ್ ಗಾಂಧಿ ಅವರೊಂದಿಗಿನ ಸಭೆಯಲ್ಲಿ ಉತ್ತರ ಭಾರತದ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಮತ್ತು ಹಿಂದಿಯನ್ನು ಚೆನ್ನಾಗಿ ತಿಳಿದಿರುವ ಅನುಭವಿ ವ್ಯಕ್ತಿಯನ್ನು ನೇಮಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಅವರು ಮಂಗಳವಾರ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಪಕ್ಷದ ಮುಖ್ಯಸ್ಥರಿಗೆ ರಾಜೀನಾಮೆ ಕೇಳಿದ್ದರು. 2024ರ ಲೋಕಸಭೆ ಚುನಾವಣೆಗೆ ತನ್ನ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್‍ನಿಂದ ಸವಾಲನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್‍ಗೆ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಆಘಾತವನ್ನುಂಟು ಮಾಡಿದೆ.
ಈ ವರ್ಷದ ಕೊನೆಯಲ್ಲಿ ಪಕ್ಷವು ಹೊಸ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.