ನವದೆಹಲಿ: ಪಕ್ಷ ಪುನರ್ ರಚನೆ ಕ್ರಮ ಕುರಿತಂತೆ ಭಿನ್ನಮತೀಯ ಸದಸ್ಯರ ಸಭೆ ಬೆನ್ನಲ್ಲೇ, ಕಾಂಗ್ರೆಸ್ ಜಿ-23 ಮುಖಂಡ ಗುಲಾಮ್ ನಬಿ ಆಜಾದ್ ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೊಳಗೊಂಡ ಸಾಮೂಹಿಕ ನಾಯಕತ್ವಕ್ಕೆ ಜಿ-23 ಮುಖಂಡರು ಧ್ವನಿ ಎತ್ತಿದ ನಂತರ ಅದರ ಸದಸ್ಯರಲ್ಲಿ ಒಬ್ಬರಾದ ಭೂಪೇಂದ್ರ ಸಿಂಗ್ ಹೂಡಾ ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಭಿನ್ನಮತೀಯ ಸದಸ್ಯರ ಪ್ರಮುಖ ಬೇಡಿಕೆಯಾದ ಪಕ್ಷ ಪುನರ್ ರಚನೆ ಕುರಿತಂತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಸೋತ ನಂತರ ನಾಯಕತ್ವದ ಬದಲಾವಣೆ ವಿಚಾರ ಹೆಚ್ಚಾಗುತ್ತಿದ್ದಂತೆ ಗಾಂಧಿ ಕುಟುಂಬ ಜಿ-23 ಮುಖಂಡರ ಮನವೊಲಿಸಲು ಮುಂದಾಗಿರುವಂತೆ ಸೋನಿಯಾ- ಆಜಾದ್ ಭೇಟಿಯಿಂದ ತಿಳಿದುಬರುತ್ತಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಕರಣ್ ಸಿಂಗ್ ಅವರನ್ನು ಕೂಡಾ ಆಜಾದ್ ಇಂದು ಬೆಳಗ್ಗೆ ಭೇಟಿಯಾಗಿದ್ದರು. ರಾಹುಲ್ ಗಾಂಧಿ ಹರಿಯಾಣದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತ ಚರ್ಚೆಗಾಗಿ ಈ ಹಿಂದೆ ಹೂಡಾ ಅವರನ್ನು ಚರ್ಚೆಗೆ ಕರೆದಿದ್ದರು. ಆದರೆ, ಚುನಾವಣೆಯಲ್ಲಿ ಸೋತ ಬಳಿಕ ಆ ಸಭೆ ನಡೆದಿರಲಿಲ್ಲ.
ಸೋನಿಯಾಗಾಂಧಿ ಬುಧವಾರ ಆಜಾದ್ ಅವರನ್ನು ಭೇಟಿಯಾದ ನಂತರ ಆಜಾದ್ ನಿವಾಸದಲ್ಲಿ ಭಿನ್ನಮತೀಯ ಮುಖಂಡರು ಸರಣಿ ಸಭೆ ನಡೆಸುತ್ತಿದ್ದಾರೆ. ಜಿ-23 ಮುಖಂಡರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪಕ್ಷದ ನಾಯಕತ್ವ ಬಯಸಿದ್ದು, ಅದರ ಮುಖಂಡರನ್ನು ಸಂಪರ್ಕಿಸುತ್ತಿದೆ. ಇದಕ್ಕಾಗಿ ಕೆಲವು ಹಿರಿಯ ಮುಖಂಡರನ್ನು ನಿಯೋಜಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.