ತಿರುವನಂತಪುರ: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಖಾಸಗಿ ಬಸ್‍ಗಳು ಮಾ 24ರಿಂದ ಅನಿಶ್ಚಿತಾವಧಿ ಮುಷ್ಕರ ನಡೆಸಲು ರಾಜ್ಯ ಬಸ್ ಮಾಲಿಕರ ಸಂಘಟನೆ ತೀರ್ಮಾನಿಸಿದೆ. ಬಸ್ ಟಿಕೆಟ್ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಯಲಿರುವುದಾಗಿ ಸಂಯುಕ್ತ ಮುಷ್ಕರ ಸಮಿತಿ ಪದಾಧಿಖಾರಿಗಳು ತಿಳಿಸಿದ್ದಾರೆ.
ಬಸ್ ಟಿಕೆಟ್ ದರ ಹೆಚ್ಚಳ ಪ್ರಮುಖ ಬೇಡಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವಗೆ ಬಸ್ ಮಾಲಿಕರ ಸಂಘ ಅನಿಶ್ಚಿತಕಾಲ ಮುಷ್ಕರ ನಡೆಸುವ ಬಗ್ಗೆ ನೋಟೀಸು ನೀಡಿದೆ. ಬಸ್ ಟಿಕೆಟ್ ದರ ತಕ್ಷಣ ಹೆಚ್ಚಿಸಬೇಕು. ಈ ಬೇಡಿಕೆ ಈಡೇರಿಸದಿದ್ದಲ್ಲಿಬಸ್ ಉದ್ದಿಮೆ ಮುಂದುವರಿಸಲು ಸಾಧ್ಯವಾಗದು ಎಂದೂ ನೋಟೀಸಿನಲ್ಲಿ ತಿಳಿಸಲಾಗಿದೆ. ಬಸ್ ಟಿಕೆಟ್ ಕನಿಷ್ಟ ದರವನ್ನು ಪ್ರಸಕ್ತ ಎಂಟು ರೂ.ನಿಂದ 12ರೂ. ಆಗಿ ಹೆಚ್ಚಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಜತೆಗೆ ವಿದ್ಯಾರ್ಥಿಗಳ ರಿಯಾಯಿತಿ ದರವನ್ನೂ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.