ನವದೆಹಲಿ: ಭಾರತೀಯ ನಾಗರಿಕರನ್ನು ರಕ್ಷಿಸುವ ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 15 ವಿಶೇಷ ವಿಮಾನಗಳ ಮೂಲಕ ಸುಮಾರು 3000 ಭಾರತೀಯರನ್ನು ಶನಿವಾರದಂದು ಏರ್ ಲಿಫ್ಟ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
3000 ಭಾರತೀಯರನ್ನು 12 ವಿಶೇಷ ನಾಗರಿಕ ಮತ್ತು ಮೂರು ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
2022 ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ ಇದುವರೆಗೆ 13,700 ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ. 55 ವಿಶೇಷ ನಾಗರಿಕ ವಿಮಾನಗಳ ಮೂಲಕ ಮರಳಿ ಕರೆತರಲಾದ ಭಾರತೀಯರ ಸಂಖ್ಯೆ 11728 ಕ್ಕೆ ಏರಿದೆ. ಇಲ್ಲಿಯವರೆಗೆ ಆಪರೇಷನ್ ಗಂಗಾದ ಭಾಗವಾಗಿ ಈ ದೇಶಗಳಿಗೆ 26 ಟನ್ ರಿಲೀಫ್ ಲೋಡ್ ಕೊಂಡೊಯ್ಯುವಾಗ 2056 ಪ್ರಯಾಣಿಕರನ್ನು ವಾಪಸ್ ಕರೆತರಲು ಕ್ರಮಕೈಗೊಳ್ಳಲಾಗಿದೆ.
ಹಿಂದಾನ್ ವಾಯುನೆಲೆಯಿಂದ ನಿನ್ನೆ ಟೇಕಾಫ್ ಆಗಿದ್ದ IAF ನ ಮೂರು C-17 ಹೆವಿ ಲಿಫ್ಟ್ ಸಾರಿಗೆ ವಿಮಾನಗಳು ಇಂದು ಬೆಳಗ್ಗೆ ಹಿಂದಾನ್‌ಗೆ ಮರಳಿದವು. ಈ ವಿಮಾನಗಳು ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ 629 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿವೆ.
ಶನಿವಾರ ಬೆಳಗ್ಗೆ ಒಂದು ವಿಮಾನವನ್ನು ಹೊರತುಪಡಿಸಿ ಎಲ್ಲಾ ನಾಗರಿಕ ವಿಮಾನಗಳು ಬಂದಿಳಿದವು, ಆದರೆ ಕೊಸಿಸ್‌ನಿಂದ ನವದೆಹಲಿಗೆ ವಿಮಾನವು ಸಂಜೆ ತಡವಾಗಿ ಆಗಮಿಸುವ ನಿರೀಕ್ಷೆಯಿದೆ. ಇಂದು ಬುಡಾಪೆಸ್ಟ್‌ನಿಂದ 5, ಸುಸೇವಾದಿಂದ 4, ಕೊಸಿಸ್ ನಿಂದ 1 ಮತ್ತು ರ್ಜೆಸ್ಜೋವ್ ನಿಂದ 2 ನಾಗರಿಕ ವಿಮಾನಗಳು ಆಗಮಿಸಿವೆ.
ಭಾನುವಾರ ಬುಡಾಪೆಸ್ಟ್, ಕೊಸಿಸ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್ ನಿಂದ 11 ವಿಶೇಷ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, 2200ಕ್ಕೂ ಹೆಚ್ಚು ಭಾರತೀಯರನ್ನು ಕರೆತರುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ.