ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಕಾರಣ ಎರಡು ವರ್ಷದಿಂದ ಸ್ಥಗಿತವಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಭಾನುವಾರದಿಂದ ಪೂರ್ಣಪ್ರಮಾಣದಲ್ಲಿ ಮರುಚಾಲನೆಗೊಂಡಿತು. ವಿವಿಧ ದೇಶಗಳಿಗೆ ವಾರಕ್ಕೆ 3,250 ವಿಮಾನಗಳು ಸಂಚರಿಸಲಿವೆ. 40 ರಾಷ್ಟ್ರಗಳ 66 ವಿಮಾನಯಾನ ಸಂಸ್ಥೆಗಳ ವಿಮಾನಗಳು ಬೇಸಿಗೆ ವೇಳಾಪಟ್ಟಿಯಂತೆ ಕಾರ್ಯಾಚರಣೆ ಆರಂಭ ಮಾಡಿದವು.
ನಿಯಮ ಸಡಿಲ: ವಿಮಾನದ ಸಿಬ್ಬಂದಿ ಪಿಪಿಇ ಕಿಟ್ ಧರಿಸುವ ಅವಶ್ಯಕತೆ ಇಲ್ಲ. ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಾಣಿಕರನ್ನು ಭೌತಿಕವಾಗಿ ತಪಾಸಣೆಗೆ ಒಳಪಡಿಸಬಹುದು ಎಂದು ಸರ್ಕಾರ ತಿಳಿಸಿದೆ.
ಯಾವ್ಯಾವ ದೇಶಗಳ ಏರ್ಲೈನ್ಸ್?: ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಸ್ರೇಲ್, ಜಪಾನ್, ಹಾಂಕಾಂಗ್, ರಷ್ಯಾ, ಬ್ರಿಟನ್, ಫ್ರಾನ್ಸ್, ಮಲೇಷ್ಯಾ, ಟರ್ಕಿ, ಬಾಂಗ್ಲಾದೇಶ, ನೇಪಾಳ, ಸೌದಿ ಅರೇಬಿಯಾ, ಮಾಲ್ದೀವ್ಸ್, ಕತಾರ್, ಥಾಯ್ಲೆಂಡ್, ಸಿಂಗಾಪುರ, ಯುಎಇ ಇನ್ನಿತರ ರಾಷ್ಟ್ರಗಳ ವಿವಿಮಾನ ಕಂಪನಿಗಳು ಕಾರ್ಯಾಚರಣೆ ಆರಂಭವಾಗಿದೆ.
ಇಳಿದ ದೈನಿಕ ಕೇಸ್: ಭಾನುವಾರ ದೇಶದಲ್ಲಿ 1,421 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 4,30,19,453ಕ್ಕೆ ಏರಿದೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 16,187 ಮಾತ್ರ ಇದೆ. ಅಂದರೆ ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಕೇಸ್ಗಳ ಪ್ರಮಾಣ ಶೇ.0.04 ಆಗಿದೆ. 24 ತಾಸಿನಲ್ಲಿ 149 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 5,21,004ಕ್ಕೆ ಮುಟ್ಟಿದೆ. ದೈನಿಕದ ಪಾಸಿಟಿವಿಟಿ ದರ ಶೇ. 0.23ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜಾಗೃತಿ ಸಂದೇಶಕ್ಕೆ ವಿರಾಮ: ಕರೊನಾ ಬಗ್ಗೆ ಜಾಗೃತಿ ವಹಿಸುವಂತೆ ದೂರವಾಣಿ/ಮೊಬೈಲ್ ಕರೆ ಮಾಡಿದ ವೇಳೆ ಕೇಳಿಬರುತ್ತಿದ್ದ ಸಂದೇಶದ ಪ್ರಕಟಣೆ ನಿಲ್ಲಿಸಲು ಸರ್ಕಾರ ಬಯಸಿದೆ. ದೂರ ಸಂಪರ್ಕ ಇಲಾಖೆಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಸಂವಹನ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಸಾಂಕ್ರಾಮಿಕದ ಕಾರಣ ಎರಡು ವರ್ಷಗಳಿಂದ ದೂರಸಂಪರ್ಕ ಸಂಸ್ಥೆಗಳು ಜಾಗೃತಿಯ ಈ ರಿಂಗ್ ಟೋನ್ನನ್ನು ಮೊಳಗಿಸುತ್ತಿದ್ದವು.
ಶಾಂಘೈ ಕೋವಿಡ್ ಹಾಟ್ಸ್ಪಾಟ್: ಚೀನಾದ ಆರ್ಥಿಕ ರಾಜಧಾನಿ ಎಂದೇ ಖ್ಯಾತವಾದ ಶಾಂಘೈನಲ್ಲಿ 48 ತಾಸಿನಲ್ಲಿ ಕರೊನಾ ಕೇಸ್ ಶೇ. 66ರಷ್ಟು ಏರಿಕೆ ಕಂಡಿದೆ. ಶನಿವಾರ 2,676 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ 1,609 ಮತ್ತು ಶುಕ್ರವಾರ 2,267 ಹೊಸ ಪ್ರಕರಣಗಳು ದೃಢಪಟ್ಟಿದ್ದವು. ಜಾಗತಿಕ ಶಿಪ್ಪಿಂಗ್ ಹಬ್ ಆಗಿರುವ ಶಾಂಘೈನಲ್ಲಿ ಪೂರ್ಣಪ್ರಮಾಣದ ಲಾಕ್ಡೌನ್ ಘೋಷಿಸಿಲ್ಲ. ಆದರೆ, ನೆಗಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಶಾಂಘೈ ಮತ್ತು ಜಿಲಿನ್ ಪ್ರಾಂತ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸುಧಾರಿಸಲು ಈ ಕೂಡಲೇ ಕ್ರಮ ಆಗಬೇಕು ಈ ಮೂಲಕ ದೇಶವನ್ನು ಕೋವಿಡ್ವುುಕ್ತಗೊಳಿಸುವ ಕಾರ್ಯ ವೇಗಗೊಳ್ಳಬೇಕು ಎಂದು ಅಧ್ಯಕ್ಷ ಷಿ ಜಿನ್ಪಿಂಗ್ ಸೂಚಿಸಿದ್ದಾರೆ. ಜಿಲಿನ್ ಪ್ರಾಂತ್ಯದಲ್ಲಿ ವಾರದ ಕೋವಿಡ್ ಸಕ್ರಿಯ ಪ್ರಕರಣಗಳ ಸರಾಸರಿ 1,500 ಇದೆ.
ವಿಮಾನ ಸಂಚಾರದ ಬೇಸಿಗೆ ಶೆಡ್ಯೂಲ್: ಈ ವಾರ ಭಾರತದ ಆರು ಏರ್ಲೈನ್ಸ್ಗಳ 1,466 ವಿಮಾನಗಳು 27 ರಾಷ್ಟ್ರಗಳ 43 ದೇಶಗಳಿಗೆ ಸಂಚರಿಸಲಿವೆ. ಇದರಲ್ಲಿ ಇಂಡಿಗೋ 505, ಏರ್ ಇಂಡಿಯಾ 361, ಏರ್ ಇಂಡಿಯಾ ಎಕ್ಸ್ಪ್ರೆಸ್ 340, ಸ್ಪೇಸ್ಜೆಟ್ 130, ಗೋಏರ್ 74, ವಿಸ್ತಾರ 56 ವಿಮಾನಗಳು ಸೇರಿವೆ. ವಿದೇಶಿ ಏರ್ಲೈನ್ಸ್ಗಳಲ್ಲಿ ಈ ವಾರ 40 ರಾಷ್ಟ್ರಗಳ 60 ವಿಮಾನಯಾನ ಕಂಪನಿಗಳು 1,783 ವಿಮಾನಗಳು ಭಾರತಕ್ಕೆ ಬಂದುಹೋಗಲಿವೆ. ಆದರೆ, ಇದರಲ್ಲಿ ಚೀನಾದ ಏರ್ಲೈನ್ಸ್ಗಳು ಇಲ್ಲ. ಈ ಪೈಕಿ ಅತಿ ಹೆಚ್ಚು ಸಂಚಾರ ನಡೆಸುವ ಐದು ಪ್ರಮುಖ ಏರ್ಲೈನ್ಸ್ಗಳೆಂದರೆ ಎಮಿರೇಟ್ಸ್ 170, ಶ್ರೀಲಂಕನ್ 128, ಒಮನ್ ಏರ್ 115, ಏರ್ ಅರೇಬಿಯಾ 110, ಸಿಂಗಾಪುರ್ ಏರ್+ಸ್ಕಾಟ್ 103 ವಿಮಾನಗಳು ಸೇರಿವೆ.