ಕಿಯೆವ್/ಮಾಸ್ಕೊ/ಲಂಡನ್: ಯೂಕ್ರೇನ್ಗೆ ನ್ಯಾಟೋ ನಿಯೋಗ ಭೇಟಿ ಸುದ್ದಿ ಬೆನ್ನಿಗೆ ರಷ್ಯಾ ಸೇನೆ ಕಿಯೆವ್ ಮೇಲೆ ದಾಳಿ ತೀವ್ರಗೊಳಿಸಿದೆ. ರಷ್ಯಾ ವಿರುದ್ಧ 4ನೇ ಸುತ್ತಿನ ನಿರ್ಬಂಧವನ್ನು ಯುರೋಪ್ ಒಕ್ಕೂಟ ವಿಧಿಸಿದೆ ಮತ್ತು ಬ್ರಿಟನ್ ಕೂಡ ನಿರ್ಬಂಧ ಪಟ್ಟಿಯನ್ನು ಪ್ರಕಟಿಸಿದೆ.
ಈ ನಡುವೆ, ಯುದ್ಧ ಸ್ಥಗಿತಗೊಳಿಸಿ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸುವಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿಸಭೆಯಲ್ಲಿ ಭಾರತ ಆಗ್ರಹಿಸಿದೆ.
ಸೇನಾಡಳಿತವನ್ನು ಏಪ್ರಿಲ್ 24ರ ತನಕ ವಿಸ್ತರಿಸಿ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪ್ರಸ್ತಾವನೆ ಯೂಕ್ರೇನ್ ಪಾರ್ಲಿಮೆಂಟ್ನಲ್ಲಿ ಈ ವಾರ ಮತಕ್ಕೆ ಬರುವ ನಿರೀಕ್ಷೆ ಇದೆ. ಅಲ್ಲದೆ, 18ರಿಂದ60ರ ವಯೋಮಾನದ ಪುರುಷರು ಯುದ್ಧದಲ್ಲಿ ತೊಡಗಿಸಿಕೊಳ್ಳುವಂತೆಯೂ ಅವರು ಕರೆ ನೀಡಿದ್ದಾರೆ.
ಕಿಯೆವ್ ಮೇಲೆ ರಷ್ಯಾ ಹೆಚ್ಚಿನ ಪ್ರಮಾಣದಲ್ಲಿ ಬಾಂಬ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಮಂಗಳವಾರ 15 ಮಹಡಿ ಕಟ್ಟಡ ಹಾನಿಗೀಡಾಗಿದೆ. ಕನಿಷ್ಠ ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ಯೂಕ್ರೇನ್ ಸೇನೆ ತಿಳಿಸಿದೆ.
ಪಶ್ಚಿಮ ಯೂಕ್ರೇನ್ ಲವಿವ್ ಸಮೀಪದ ಅಂಟೊಪೋಲ್ನಲ್ಲಿ ಟಿವಿ ಟವರ್ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದೆ. ರಿವ್ನ್ ರೀಜಿನಲ್ ಗವರ್ನಮೆಂಟ್ ಫೇಸ್ಬುಕ್ ಪೇಜ್ನಲ್ಲಿ ಈ ಅಪ್ಡೇಟ್ ನೀಡಿದೆ. ಅಂಟೊಪೋಲ್ ನ್ಯಾಟೋ ಸದಸ್ಯ ರಾಷ್ಟ್ರ ಪೋಲೆಂಡ್ನ ಗಡಿ ಭಾಗದಿಂದ 160 ಕಿ.ಮೀ. ದೂರದಲ್ಲಿದೆ. ಈ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ ಎಂದು ಯೂಕ್ರೇನ್ ಸೇನೆ ಹೇಳಿದೆ.
ಕಿಯೆವ್ನತ್ತ ಯುರೋಪ್ ನಿಯೋಗ: ರಷ್ಯಾದ ದಾಳಿ ತೀವ್ರಗೊಂಡ ಬೆನ್ನಿಗೆ ಯೂಕ್ರೇನ್ ರಾಜಧಾನಿ ಕಿಯೆವ್ನತ್ತ ಯುರೋಪ್ ಒಕ್ಕೂಟದ ನಿಯೋಗ ದೌಡಾಯಿಸಿದೆ. ನಿಯೋಗದಲ್ಲಿ ಪೋಲೆಂಡ್ ಪ್ರಧಾನಿ ಮಟೆಯುಝå್ ಮೊರಾವೈಕಿ, ಝೆಕ್ ರಿಪಬ್ಲಿಕ್ನ ಪ್ರಧಾನಿ ಪೆಟ್ರ್ ಫೈಲಾ, ಸ್ಲೊವಾನಿಯಾದ ಪ್ರಧಾನಿ ಜನೇಝå್ ಜನ್ಸಾ, ಪೋಲಂಡ್ನ ಡೆಪ್ಯೂಟಿ ಪಿಎಂ ಜರೋಸ್ಲಾವ್ ಕಝಿನ್ಸ್ಕಿ ಕೂಡ ಇದ್ದಾರೆ. ಈ ನಿಯೋಗ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮತ್ತು ಪ್ರಧಾನಿ ಡೆನಿಸ್ ಶ್ಮಿಹಾಲ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ನಮ್ಮ ಕರ್ತವ್ಯವನ್ನು ಪಾಲಿಸಬೇಕಾದ್ದು ಅವಶ್ಯ. ಇದು ನಮಗೋಸ್ಕರ ಅಲ್ಲ. ನಮ್ಮ ಭವಿಷ್ಯ, ನಮ್ಮ ಮಕ್ಕಳಿಗೋಸ್ಕರ ಅವರ ತಲೆಮಾರಿಗೆ ಜಗತ್ತನ್ನು ಉಳಿಸಲು ನಾವು ಈ ಕ್ರಮ ತೆಗೆದುಕೊಳ್ಳಬೇಕಾಗಿದೆ. ನಮ್ಮ ನಿಯೋಗದ ಭೇಟಿಯನ್ನು ಸುರಕ್ಷತೆ ಕಾರಣಕ್ಕೆ ಗೌಪ್ಯವಾಗಿ ಇಡಲಾಗಿತ್ತು ಎಂದು ಮೊರಾವೈಕಿ ಹೇಳಿಕೊಂಡಿದ್ದಾರೆ.
ಚೀನಾ ಕಂಪನಿಗಳಿಗೆ ನಿರ್ಬಂಧ ಭೀತಿ: ಅಮೆರಿಕದಲ್ಲಿರುವ ಚೀನಾ ಕಂಪನಿಗಳು ನಿರ್ಬಂಧ ಭೀತಿ ಎದುರಿಸುತ್ತಿವೆ. ಇದನ್ನು ತಪ್ಪಿಸುವುದಕ್ಕೆ, ಚೀನಾದ ಹಿತವನ್ನು ಕಾಪಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ರಷ್ಯಾ- ಯೂಕ್ರೇನ್ ಬಿಕ್ಕಟ್ಟಿನಲ್ಲಿ ಚೀನಾ ಯಾವುದರ ಪರವೂ ಇಲ್ಲ. ನಿರ್ಬಂಧದ ಹೊಡೆತವನ್ನು ತಪ್ಪಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಸ್ಪಷ್ಟಪಡಿಸಿದ್ದಾರೆ.
- ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಹನ್ನೆರಡಕ್ಕೂ ಹೆಚ್ಚು ನಾಯಕರಿಗೆ ತನ್ನ ದೇಶ ಪ್ರವೇಶಿಸದಂತೆ ರಷ್ಯಾ ನಿರ್ಬಂಧ ಹೇರಿದೆ.
ಚೀನಾದಿಂದ ಡ್ರೋನ್ ಕೇಳಿದ ರಷ್ಯಾ: ಯೂಕ್ರೇನ್ ವಿರುದ್ಧ ಸಮರದಲ್ಲಿ ಬಳಸುವುದಕ್ಕಾಗಿ ಮಾನವರಹಿತ ಸಶಸ್ತ್ರ ಡ್ರೋನ್ಗಳನ್ನು ಪೂರೈಸುವಂತೆ ಚೀನಾಕ್ಕೆ ರಷ್ಯಾ ಮನವಿ ಮಾಡಿದೆ. ಈ ಕುರಿತು ಎಚ್ಚರದಿಂದ ಇರುವಂತೆ ನ್ಯಾಟೊ ಮಿತ್ರ ರಾಷ್ಟ್ರಗಳಿಗೆ ಅಮೆರಿಕ ಎಚ್ಚರಿಸಿದೆ. ರೋಮ್ಲ್ಲಿ ಸೋಮವಾರ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜಿಯೆಚಿ ಜತೆಗೆ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ ಜೇಕ್ ಸುಲ್ಲಿವಾನ್ ಆರು ಗಂಟೆ ಮಾತುಕತೆ ನಡೆಸಿದ ವೇಳೆ ರಷ್ಯಾ ಡ್ರೋನ್ ಕೇಳಿರುವ ವಿಚಾರ ದೃಢವಾಗಿದೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.
ಮುಖ್ಯಾಂಶಗಳು
- ತೆಲಂಗಾಣದಲ್ಲಿ ಯೂಕ್ರೇನ್ನಿಂದ ಹಿಂದಿರುಗಿದ 740 ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ವೆಚ್ಚ ಭರಿಸುವುದಾಗಿ ಘೋಷಿಸಿದ ಕೆ.ಸಿ.ಆರ್ ಸರ್ಕಾರ.
- ಯುದ್ಧದ ಬಗ್ಗೆ ಅಸಮಾಧಾನ ಹೊಂದಿದ್ದ ರಷ್ಯಾದ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ ಒವಿಡಿ ಇನ್ಪೋ ವಾರ್ತಾ ಪ್ರಸಾರ ಲೈವ್ ಆಗಿದ್ದ ವೇಳೆ ಯುದ್ಧ ವಿರೋಧಿ ಪೋಸ್ಟರ್ ಹಿಡಿದು ಸ್ಟುಡಿಯೋಕ್ಕೆ ಹೋಗಿದ್ದ ಪ್ರತಿಭಟನಾಗಾರ್ತಿ.
30 ಲಕ್ಷ ಬ್ಯಾರೆಲ್ ತೈಲ ಖರೀದಿ: ರಷ್ಯಾ ವಿರುದ್ಧ ನಿರ್ಬಂಧ ಹೆಚ್ಚಾಗಿದ್ದು, ಭಾರತದ ಇಂಡಿಯನ್ ಆಯಿಲ್ ಕಾರ್ಪೆರೇಷನ್ ರಷ್ಯಾದ ಉರಲ್ಸ್ ಆಯಿಲ್ನ 30 ಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದೆ. ಜಿನೀವಾ ಮೂಲದ ವ್ಯಾಪಾರ ಸಂಸ್ಥೆ ವೈಟಲ್ ಮೂಲಕ ಇದನ್ನು ಖರೀದಿಸಿದ್ದು, ಮೇ ತಿಂಗಳಲ್ಲಿ ಪೂರೈಕೆ ಆಗಲಿದೆ. ಪ್ರತಿಬ್ಯಾರೆಲ್ಗೆ 20-25 ಡಾಲರ್ ರಿಯಾಯಿತಿ ದರದಲ್ಲಿ ಈ ಖರೀದಿ ನಡೆದಿದೆ.