ಪಣಜಿ: ಗೋವಾ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ಆದರೆ, ಸರ್ಕಾರ ರಚನೆಗೆ ಸಂಖ್ಯೆಯ ಕೊರತೆ ಎದುರಿಸುವಂತಾಗಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 21 ಮತಗಳು ಅಗತ್ಯ. ಸದ್ಯ ಬಿಜೆಪಿ 19ರಲ್ಲಿ ಸ್ಥಿರವಾಗಿದ್ದು, ಬಹುಮತಕ್ಕೆ ಎರಡರಿಂದ ಮೂವರು ಶಾಸಕರ ಕೊರತೆಯುಂಟಾಗಿದೆ. ಪರಿಸ್ಥಿತಿ ಹೀಗಿರುವಾಗಲೇ, ಮೂವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಸರ್ಕಾರ ರಚಿಸಲು ಬಿಜೆಪಿ ಹಾದಿ ಸುಗಮವಾದಂತಾಗಿದೆ.
ಬಿಚೊಲಿಮ್ ಕ್ಷೇತ್ರದ ಡಾ ಚಂದ್ರಕಾಂತ ಶೇಟಿ, ಕೊರ್ಟಲಿಮ್ ಕ್ಷೇತ್ರ ಮ್ಯಾನುಯೆಲ್ ವೇಜ್, ಕಾರ್ಟೊರಿಮ್ ಕ್ಷೇತ್ರದ ಅಲೆಕ್ಸೊ ರೆಜಿನಾಲ್ಡೊ ತಾವು ಬಿಜೆಪಿಗೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರ ರಚಿಸಲು ಬಿಜೆಪಿಗೆ ಎದುರಾಗಿದ್ದ ಸಂಖ್ಯೆಗಳ ಕೊರತೆ ಈ ಮೂವರು ಪಕ್ಷೇತರರ ಬೆಂಬಲದೊಂದಿಗೆ ನಿವಾರಣೆಯಾಗಿದೆ.
ಸದ್ಯ ಗೋವಾದಲ್ಲಿ ಬಿಜೆಪಿ 19 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ, ಎಎಪಿ 2 ಮತ್ತು ಇತತರರು ಏಳು ಕ್ಷೇತ್ರಗಳಲ್ಲಿ ಮುಂದಿದ್ದಾರೆ.