ಉಕ್ರೇನ್-ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಇದರ ಮಧ್ಯೆ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲವ್ರೋವ್ 3ನೇ ಮಹಾಯುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನೊಳಗೊಂಡ ವಿನಾಶಕಾರಿಯಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಾಸ್ಕೋ(ರಷ್ಯಾ): ಉಕ್ರೇನ್-ರಷ್ಯಾ ಮಧ್ಯೆ ಕಳೆದ ಏಳು ದಿನಗಳಿಂದ ಯುದ್ಧ ಮುಂದುವರೆದಿದ್ದು, ಇಲ್ಲಿಯವರೆಗೆ ಸಾವಿರಾರು ಜನರು, ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಕೂಡ ಉಭಯ ದೇಶಗಳ ಮಧ್ಯೆ ಮಹತ್ವದ ಮಾತುಕತೆ ನಡೆಯಲಿದ್ದು, ಇದರ ಮಧ್ಯೆಯೂ ಕೂಡ ರಷ್ಯಾ ಮಿಲಿಟರಿ ಕಾರ್ಯಾಚರಣೆ ಮುಂದುವರೆದಿದೆ.
'3ನೇ ಮಹಾಯುದ್ಧ ಹೆಚ್ಚು ವಿನಾಶಕಾರಿ': ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುತ್ತಿರುವ ಕಾರಣ ಇದೇ ವಿಚಾರವಾಗಿ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲವ್ರೋವ್ ಮಾತನಾಡಿದ್ದಾರೆ. ಮೂರನೇ ಮಹಾಯುದ್ಧವು ಪರಮಾಣು ಶಸ್ತ್ರಾಸ್ತ್ರಗಳಿಂದ ನಡೆಲಿಯದ್ದು ಅತ್ಯಂತ ವಿನಾಶಕಾರಿಯಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಹೇಳಿದಂತೆ ಉಕ್ರೇನ್ ನಡೆಯುತ್ತಿದ್ದು, ನಾವು ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
'ರಷ್ಯಾದ 6 ಸಾವಿರ ಯೋಧರ ಹೊಡೆದುರುಳಿಸಿದ್ದೇವೆ': ಉಕ್ರೇನ್ ದೇಶ ಅಲ್ಲಿನ ಜನರು ಮತ್ತು ಇತಿಹಾಸವನ್ನು ಅಳಿಸಿ ಹಾಕಲು ರಷ್ಯಾ ಮುಂದಾಗಿದೆ ಎಂದು ವಿಡಿಯೋ ಹರಿಬಿಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಮಾನವೀಯತೆ ಬಿಟ್ಟು ರಷ್ಯಾ ದಾಳಿ ನಡೆಸುತ್ತಿದೆ. ಆದರೆ, ಇದಕ್ಕೆ ನಾವು ಸರಿಯಾದ ತಿರುಗೇಟು ನೀಡ್ತಿದ್ದು, ಇಲ್ಲಿಯವರೆಗೆ ರಷ್ಯಾದ ಆರು ಸಾವಿರ ಯೋಧರನ್ನ ಹೊಡೆದುರುಳಿಸಿದ್ದೇವೆ ಎಂದಿದ್ದಾರೆ.