ಡ್ರೈ ಫ್ರೂಟ್ಸ್ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಏಕೆಂದರೆ, ಇದು ಹಲವು ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಅವುಗಳನ್ನು ನಿಯಮಿತವಾಗಿ ಸೇವಿಸಿದರೆ, ದೇಹದ ಅನೇಕ ಅಗತ್ಯ ಪೋಷಣೆಯನ್ನು ಪೂರೈಸಲು ಬಾಹ್ಯ ಪೂರಕಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
ಅದರಲ್ಲೂ ಮಧುಮೇಹ ರೋಗಿಗಳಿಗೆ ಇದು ಉತ್ತಮ ಪೋಷಕಾಂಶದ ಮೂಲವಾಗಿದೆ. ಬೇರೆ ಆಹಾರಗಳನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕಾದ ಮಧುಮೇಹಿಗಳು, ಡ್ರೈ ಫ್ರೂಟ್ಸ್ ಸೇವನೆ ಮಾಡುವಾಗ ಆರಾಮವಾಗಿರಬಹುದು. ಆದರೆ, ಅತಿ ಬೇಡ. ಏಕೆಂದರೆ ಇದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾದರೆ ಇಂದು ನಾವು ಮಧುಮೇಹಿಗಳು ಸೇವಿಸಲೇಬೇಕಾದ 3 ಒಣ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ.
ಮಧುಮೇಹಿಗಳು ಸೇವಿಸಲೇಬೇಕಾದ ಮೂರು ಮುಖ್ಯ ಡ್ರೈ ಫ್ರೂಟ್ಸ್ ಬಗ್ಗೆ ಈ ಕೆಳಗೆ ನೀಡಲಾಗಿದೆ:
1. ಕಡಲೆಕಾಯಿ: ಕಡಲೆಕಾಯಿಯಲ್ಲಿ ಫೈಬರ್, ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ಆಲ್ಫಾ ಲಿಪೊಯಿಕ್ ಆಮ್ಲಗಳು ಸಮೃದ್ಧವಾಗಿವೆ. ಈ ಎಲ್ಲಾ ಪೋಷಕಾಂಶಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳು ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ, ಏಕೆಂದರೆ ಅವು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತವೆ. ಆದ್ದರಿಂದ ಈ ಕಡಲೆಕಾಯಿ ಉತ್ತಮ ಆಯ್ಕೆಯಾಗಿದೆ.
2. ಬಾದಾಮಿ: ಮಧುಮೇಹ ರೋಗಿಗಳಿಗೆ ಬಾದಾಮಿ ಮುಖ್ಯವಾಗಿದೆ ಏಕೆಂದರೆ ಅದರಲ್ಲಿ ಮೆಗ್ನೀಸಿಯಮ್ ಕಂಡುಬರುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದಲ್ಲದೆ, ಈ ಡ್ರೈ ಫ್ರೂಟ್ ವಿಟಮಿನ್-ಡಿ ಮತ್ತು ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೇ, ಇದರಲ್ಲಿ ಕಂಡುಬರುವ ಅಧಿಕ ಕೊಬ್ಬು, ಪ್ರೊಟೀನ್ ಮತ್ತು ನಾರಿನಂಶವು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
3. ವಾಲ್್ನಟ್ಸ್: ಡಯಾಬಿಟಿಸ್ ಇರುವವರು ಸೇವಿಸಬೇಕಾದ ಮೂರನೆಯ ಒಣ ಹಣ್ಣು ಆಕ್ರೋಡು ಅಥವಾ ವಾಲ್‌ನಟ್ಸ್. ಇದರ ಸೇವನೆಯು ಮಧುಮೇಹಿಗಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿರಿಸುತ್ತದೆ. ಏಕೆಂದರೆ ವಾಲ್‌ನಟ್ಸ್‌ನಲ್ಲಿ ನಾರಿನಂಶವಿದ್ದು. ಅದು ರಕ್ತದಲ್ಲಿನ ಸಕ್ಕರೆಯನ್ನು ಅಧಿಕವಾಗಲು ಬಿಡುವುದಿಲ್ಲ. ಜೊತೆಗೆ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ. ವಾಲ್‌ನಟ್ಸ್‌ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿದ್ದು, ಇದು ಹೃದಯವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ವಯಸ್ಸಾದ ಪರಿಣಾಮಗಳನ್ನು ತಡೆಯುತ್ತದೆ.
ಮಧುಮೇಹಿಗಳಿಗೆ ಇತರ ಆಹಾರಗಳು: ಒಮ್ಮೆ ವ್ಯಕ್ತಿಗೆ ಮಧುಮೇಹ ಬಂತೆಂದರೆ, ಆತ ಮುಖ್ಯವಾಗಿ ತನ್ನ ಜೀವನಶೈಲಿ ಅದರಲ್ಲೂ ಆಹಾರಕ್ರಮದಲ್ಲಿ ಬದಲಾವಣೆ ತರಬೇಕು. ಅವರ ಆಹಾರ ಹಣ್ಣು ಮತ್ತು ತರಕಾರಿಗಳಿಂದ ಅರ್ಧ ಬಟ್ಟಲು ತುಂಬಿರಬೇಕು. ಇದರ ಬಳಿಕ ಕಾರ್ಬೋಹೈಡ್ರೇಟ್ಸ್ ಮತ್ತು ಕೆಲವೊಂದು ಪ್ರೋಟೀನ್ ಗಳನ್ನು ಕೂಡ ಆಯ್ಕೆ ಮಾಡಬೇಕು. ಕರಿದ ಆಹಾರ ಸೇವನೆ ಮಾಡುವ ಬದಲು ಯಾವಾಗಲೂ ಹಬೆಯಲ್ಲಿ ಬೇಯಿಸಿದ ಅಥವಾ ಗ್ರಿಲ್ ಮಾಡಲ್ಪಟ್ಟಿರುವ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಕೊಬ್ಬು ಮತ್ತು ಎಣ್ಣೆಯಂಶವನ್ನು ಆದಷ್ಟು ಕಡಿಮೆ ಮಾಡಬೇಕು. ನಿತ್ಯದ ಆಹಾರ ಕ್ರಮದಲ್ಲಿ ಎಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್ ಸೇವನೆ ಮಾಡುತ್ತಿದ್ದೀರಿ ಎನ್ನುವ ಕಡೆಗೆ ಗಮನಹರಿಸಬೇಕು. ಕುಚ್ಚಲಕ್ಕಿ, ಚಪಾತಿ, ಓಟ್ಸ್ ಮತ್ತು ಇಡೀ ಧಾನ್ಯದ ನೂಡಲ್ ಮತ್ತು ಪಾಸ್ತಾವನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಅಧಿಕ ಪ್ರಮಾಣದ ನಾರಿನಾಂಶವಿದ್ದು, ಇದು ರಕ್ತದಲ್ಲಿ ಗ್ಲುಕೋಸ್ ಅಂಶವು ತುಂಬಾ ನಿಧಾನವಾಗಿ ಇಳಿಯಲು ಸಹಕಾರಿ.