ನವದೆಹಲಿ: ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಭಾರತ- ಜಪಾನ್ ಶಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾರತಕ್ಕೆ ಆಗಮಿಸಿದ್ದು, ಮುಂದಿನ ಐದು ವರ್ಷಗಳಿಗಾಗಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ (42 ಬಿಲಿಯನ್ ಡಾಲರ್) ಹೂಡಿಕೆ ಯೋಜನೆ ಘೋಷಿಸುವ ಸಾಧ್ಯತೆಯಿದೆ.
2014 ರ ಭಾರತಕ್ಕೆ ಭೇಟಿ ನೀಡಿದ ಆಗಿನ ಪ್ರಧಾನಿ ಶಿಂಜೋ ಅಬೆ, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 3.5 ಟ್ರಿಲಿಯನ್ ಹೂಡಿಕೆಯನ್ನು ಘೋಷಿಸಿದ್ದರು. ಆದರೆ, ಫ್ಯೂಮಿಯೊ ಕಿಶಿದಾ 5 ಟ್ರಿಲಿಯನ್ ಯೆನ್ ಹೂಡಿಕೆ ಯೋಜನೆ ಘೋಷಿಸುವ ಸಾಧ್ಯತೆಯಿದೆ ಎಂದು ಜಪಾನಿನ ನಿಕ್ಕಿ ಪತ್ರಿಕೆ ವರದಿ ಮಾಡಿದೆ.
ಜಪಾನ್ ಪ್ರಸ್ತುತ ಭಾರತದ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಪಾನ್‌ನ ಶಿಂಕನ್‌ಸೆನ್ ಬುಲೆಟ್ ಟ್ರೈನ್ ತಂತ್ರಜ್ಞಾನವನ್ನು ಆಧರಿಸಿದ ಹೈಸ್ಪೀಡ್ ರೈಲ್ವೆಯನ್ನು ಬೆಂಬಲಿಸುತ್ತಿದೆ. ಪ್ರಧಾನ ಮಂತ್ರಿ ಕಿಶಿದಾ ಅವರು ಆರ್ಥಿಕ ವೇದಿಕೆ ಸಂದರ್ಭದಲ್ಲಿ ಸಾರ್ವಜನಿಕ-ಖಾಸಗಿ ನಿಧಿಯನ್ನು ಬಹಿರಂಗಪಡಿಸಲಿದ್ದಾರೆ. ಭಾರತದಲ್ಲಿ ಜಪಾನ್ ಕಂಪನಿಗಳ ವಿಸ್ತರಣೆಯನ್ನು ಹೆಚ್ಚಿಸುವ ಮತ್ತು ವ್ಯವಹಾರದಲ್ಲಿ ನೇರ ಹೂಡಿಕೆ ಬೆಳವಣಿಗೆಯನ್ನು ಪ್ರತಿಜ್ಞೆ ಮಾಡುವ ಸಾಧ್ಯತೆಯಿದೆ ಎಂದು ಪತ್ರಿಕೆ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಮಯದಲ್ಲಿ ಸರಿಸುಮಾರು 300 ಬಿಲಿಯನ್ ಯೆನ್ ಸಾಲವನ್ನು ಒಪ್ಪಿಕೊಳ್ಳಲು ಕಿಶಿದಾ ಸಿದ್ಧರಾಗಿದ್ದಾರೆ. ಕಾರ್ಬನ್ ಕಡಿತಕ್ಕೆ ಸಂಬಂಧಿಸಿದ ಇಂಧನ ಸಹಕಾರ ದಾಖಲೆಗೆ ಉಭಯ ಪಕ್ಷಗಳ ನಡುವೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.