ಮುಂಬೈ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ. ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂಬ ಭೀತಿ ದೂರವಾಗುತ್ತಿದ್ದಂತೆ ಇಂದು ಮುಂಬೈ ಷೇರುಪೇಟೆ ಮತ್ತೆ ಕುದುರಿಕೊಂಡಿದೆ.
ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ ಎರಡೂ ಮಾರುಕಟ್ಟೆಯ ಸೂಚ್ಯಂಕಗಳು ಹಸಿರು ಮಾರ್ಕ್‌ನಲ್ಲಿ ತೆರೆದು ದಿನವಿಡೀ ಲಾಭದೊಂದಿಗೆ ವಹಿವಾಟು ನಡೆಸಿದವು. ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ವಹಿವಾಟಿನ ಅಂತ್ಯಕ್ಕೆ 1,223 ಅಂಕಗಳ ಏರಿಕೆಯೊಂದಿಗೆ 54,647 ಮಟ್ಟದಲ್ಲಿ ಮುಕ್ತಾಯಗೊಂಡರೆ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ 332 ಅಂಕಗಳ ಜಿಗಿತದೊಂದಿಗೆ 16,325 ಅಂಕಗಳೊಂದಿಗೆ ಕೊನೆಗೊಂಡಿತು.
ಏರಿಕೆಯೊಂದಿಗೆ ಮಾರುಕಟ್ಟೆ ಆರಂಭ:
ಷೇರುಪೇಟೆ ವಹಿವಾಟಿನ ಆರಂಭದಲ್ಲಿ ಬಿಎಸ್ಇ ಸೆನ್ಸೆಕ್ಸ್ 148 ಅಂಕಗಳ ಏರಿಕೆಯೊಂದಿಗೆ 53,573 ರಲ್ಲಿ ಪ್ರಾರಂಭವಾಯಿತು. ಆದರೆ, ನಿಫ್ಟಿ ಸೂಚ್ಯಂಕ 40 ಅಂಕಗಳ ಏರಿಕೆಯೊಂದಿಗೆ 16,053 ಅಂಕಗಳೊಂದಿಗೆ ವಹಿವಾಟು ಆರಂಭಿಸಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1000 ಅಂಕಗಳ ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿತು. ಇನ್ನೊಂದೆಡೆ ಮಂಗಳವಾರ ಬಿಎಸ್‌ಇ ಸೆನ್ಸೆಕ್ಸ್ ಕೊನೆಯ ವಹಿವಾಟಿನಲ್ಲಿ 581 ಪಾಯಿಂಟ್‌ಗಳ ಏರಿಕೆಯೊಂದಿಗೆ 53,424 ಕ್ಕೆ ಕೊನೆಗೊಂಡಿತ್ತು. ಮತ್ತೊಂದೆಡೆ ನಿಫ್ಟಿ ಸೂಚ್ಯಂಕ 150 ಪಾಯಿಂಟ್‌ಗಳ ಏರಿಕೆಯೊಂದಿಗೆ 16,013 ಮಟ್ಟದಲ್ಲಿ ಮುಕ್ತಾಯ ಕಂಡಿತ್ತು.
ಬುಧವಾರದ ಮಾರುಕಟ್ಟೆಯಲ್ಲಿನ ಷೇರುಗಳ ಓಟದಿಂದಾಗಿ ಹೂಡಿಕೆದಾರರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಲಾಭವನ್ನು ಪಡೆದಿದ್ದಾರೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾಗಿರುವ ಎಂಕ್ಯಾಪ್ ಕಂಪನಿಗಳು 248.4 ಲಕ್ಷ ಕೋಟಿ ರೂ.ಗೆ ತಲುಪಿತ್ತು, ಇದು ಕಳೆದ ವಹಿವಾಟಿನಲ್ಲಿ 243.7 ಲಕ್ಷ ಕೋಟಿ ರೂ. ಆಗಿತ್ತು.
ರಿಲಯನ್ಸ್-ಐಸಿಐಸಿಐನಲ್ಲಿ ಏರಿಕೆ
ಇಂದಿನ ವಹಿವಾಟಿನ ವೇಳೆ ರಿಲಯನ್ಸ್, ಐಸಿಐಸಿಐ ಮತ್ತು ಟೆಕ್ ಮಹೀಂದ್ರಾ ಷೇರುಗಳಲ್ಲಿ ಭಾರಿ ಜಿಗಿತ ಕಂಡುಬಂದಿದೆ. ರಿಲಯನ್ಸ್ ಮತ್ತು ಟೆಕ್ಸ್ ಮಹೀಂದ್ರಾ ಷೇರುಗಳು ಶೇಕಡಾ 4 ರಷ್ಟು ಲಾಭ ಗಳಿಸಿದವು. ಆದರೆ, ಕೋಟಕ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ನೆಸ್ಲೆ, ಏರ್‌ಟೆಲ್ ಮತ್ತು ಟಾಟಾ ಸ್ಟೀಲ್ ಸೇರಿದಂತೆ ಪ್ರಮುಖ ಕಂಪನಿಗಳು ನಷ್ಟ ಅನುಭವಿಸಿವೆ. ಇದಲ್ಲದೆ ಡಾ.ರೆಡ್ಡಿ, ಇನ್ಫೋಸಿಸ್, ಸನ್ ಫಾರ್ಮಾ, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟಿಸಿಎಸ್ ಮತ್ತು ಪವರ್‌ಗ್ರಿಡ್ ಸಹ ಲಾಭ ಗಳಿಸಿವೆ.