ನವದೆಹಲಿ: ನೆರೆ ದೇಶಗಳೊಂದಿಗೆ ಬಿಗುವಿನ ಆತಂಕ ವಾತಾವರಣ ಮಧ್ಯೆ ಕೇಂದ್ರ ಸರ್ಕಾರ ವಾರ್ಷಿಕ ಬಜೆಟ್ ನಲ್ಲಿ ದೇಶದ ಭದ್ರತೆಗೆ, ಮಿಲಿಟರಿಗೆ ಎಷ್ಟು ಹಣ ಬಿಡುಗಡೆ ಮಾಡುತ್ತದೆ ಎಂದು ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ದೇಶದ ಮಿಲಿಟರಿಯ ಮೂರೂ ವಿಭಾಗಗಳ ಬೇಡಿಕೆ ಮತ್ತು ಬಜೆಟ್ ಹಂಚಿಕೆ ನಡುವಿನ ಅಂತರವನ್ನು ಉಲ್ಲೇಖಿಸಿದ ಸಮಿತಿಯು ಮುಂಬರುವ ವರ್ಷಗಳಲ್ಲಿ ರಕ್ಷಣಾ ಸಚಿವಾಲಯವು ಮಿಲಿಟರಿ ವೆಚ್ಚದಲ್ಲಿ ಯಾವುದೇ ಕಡಿತವನ್ನು ಮಾಡಬಾರದು ಎಂದು ಶಿಫಾರಸು ಮಾಡಿದೆ.
ನಿನ್ನೆ ಲೋಕಸಭೆಯಲ್ಲಿ ವರದಿ ಮಂಡಿಸಿದ ಸಮಿತಿ, 2022-23ಕ್ಕೆ 2,15,995 ಕೋಟಿ ರೂಪಾಯಿಗಳಿಗೆ ಬೇಡಿಕೆಯಿಡಲಾಗಿತ್ತು. ಆದರೆ ಬಜೆಟ್ ನಲ್ಲಿ ಅನುಮೋದನೆ ಮಾಡಿದ್ದು 1,52,369.61 ಕೋಟಿ ರೂಪಾಯಿ. ಬಜೆಟ್ ನಲ್ಲಿ ರಕ್ಷಣಾ ನಿಧಿಯ ಕಡಿತವು ರಕ್ಷಣಾ ಸೇವೆಗಳ ಕಾರ್ಯಾಚರಣೆಯ ಸನ್ನದ್ಧತೆಯ ವಿಷಯದಲ್ಲಿ ರಾಜಿ ಮಾಡಿಕೊಂಡಂತಾಗುತ್ತದೆ ಎಂದು ಸಮಿತಿ ಹೇಳಿದೆ.
2022-23ರಲ್ಲಿ BE (ಬಜೆಟ್ ಅಂದಾಜು) ಹಂತದಲ್ಲಿ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಯೋಜಿತ ಮತ್ತು ನಿಗದಿಪಡಿಸಿದ ಬಜೆಟ್ ನಡುವಿನ ಅಂತರವು ಕ್ರಮವಾಗಿ 14,729.11 ಕೋಟಿ ರೂಪಾಯಿಗಳು, 20,031.97 ಕೋಟಿ ಮತ್ತು 28,471.05 ಕೋಟಿಗಳಷ್ಟಿದೆ ಎಂದು ಸಮಿತಿಯು ಅಂದಾಜಿಸಿದೆ.
"ನಮ್ಮ ನೆರೆಯ ದೇಶಗಳೊಂದಿಗೆ, ವಿಶೇಷವಾಗಿ ನಮ್ಮ ದೇಶದ ಗಡಿಗಳಲ್ಲಿ ಹೆಚ್ಚಿದ ಉದ್ವಿಗ್ನತೆಯ ಪ್ರಸ್ತುತ ಸನ್ನಿವೇಶದಲ್ಲಿ, ಬಜೆಟ್ ನಲ್ಲಿ ಅನುದಾನ ಕಡಿತ ಮಾಡುವುದು ರಕ್ಷಣಾ ಸನ್ನದ್ಧತೆಗೆ ಅನುಕೂಲಕರವಲ್ಲ" ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಸಮಿತಿಯು ತನ್ನ ಹಿಂದಿನ ವರದಿಗಳಲ್ಲಿ ಬಂಡವಾಳ ಬಜೆಟ್ ನ್ನು "ನಾನ್-ಲ್ಯಾಪ್ಸಬಲ್" ಮತ್ತು "ರೋಲ್-ಆನ್" ಮಾಡಲು ಶಿಫಾರಸು ಮಾಡಿತ್ತು.
2020-21ರಲ್ಲಿ 3,43,822.00 ರೂಪಾಯಿಗಳ ಒಟ್ಟು ಬಜೆಟ್ ಹಂಚಿಕೆಯಲ್ಲಿ, 2020ರ ಡಿಸೆಂಬರ್ವರೆಗೆ ಸಚಿವಾಲಯವು ಕೇವಲ 2,33,176.70 ರೂಪಾಯಿಗಳನ್ನು ಮಾತ್ರ ಬಳಸಿಕೊಂಡಿದೆ ಎಂದು ಸಮಿತಿಯು ಹೇಳಿದೆ. ಸಮಿತಿಯು ಬಿಜೆಪಿ ಸಂಸದ ಜುಯಲ್ ಓರಮ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಸುಮಾರು 30 ಶಾಸಕರನ್ನು ಒಳಗೊಂಡಿದೆ.