ನವದೆಹಲಿ: ಎನ್‌ಎಸ್‌ಇ ಕೋ-ಲೊಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ(ಎನ್‌ಎಸ್‌ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.
ಸಿಸಿಟಿವಿ ನಿಗಾದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಆರೋಪಿ ಚಿತ್ರಾ ರಾಮಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಪ್ರತಿದಿನ ಸಂಜೆ ಆಕೆಯ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಿದ ನ್ಯಾಯಾಲಯ, ಚಿತ್ರಾ ರಾಮಕೃಷ್ಣ ಅವರನ್ನು ಪ್ರತಿ 24 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸಿಬಿಐಗೆ ಸೂಚಿಸಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಅವರ ಮುಂದೆ ಸಿಬಿಐ ಪ್ರಕರಣವನ್ನು ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ರಾಮಕೃಷ್ಣ ಅವರು “ತನಿಖೆಗೆ ಸಹಕರಿಸುತ್ತಿಲ್ಲ” ಮತ್ತು “2,500ಕ್ಕೂ ಹೆಚ್ಚು ದೋಷಾರೋಪಣೆ ಇಮೇಲ್‌ಗಳನ್ನು” ಎದುರಿಸಬೇಕಾಯಿತು ಎಂದು ಹೇಳಿದರು.
ಮಾಜಿ ಎನ್‌ಎಸ್‌ಇ ಸಿಇಒ ಸಹ ಆರೋಪಿ ಆನಂದ್ ಸುಬ್ರಮಣಿಯನ್ ಜೊತೆಗಿನ ತನ್ನ ಹಿಂದಿನ ಸಂಬಂಧವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಮತ್ತು ಅವರನ್ನು ಗುರುತಿಸಲು ನಿರಾಕರಿಸಿದ್ದಾರೆ ಎಂದು ಸಿಬಿಐ ವಾದಿಸಿದೆ.
ಆದರೆ, ತನಿಖೆಯ ನಿಧಾನಗತಿಯ ಬಗ್ಗೆ ಸಿಬಿಐ ಅನ್ನು ಪ್ರಶ್ನಿಸಿದ ನ್ಯಾಯಾಧೀಶರು, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರರನ್ನು ಇದುವರೆಗೆ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.