ಕಾಸರಗೋಡು: ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ಯೋಜನೆಯ ಕಾಮಗಾರಿಯನ್ನು ಏಪ್ರಿಲ್ 7ರೊಳಗೆ ಆರಂಭಿಸಲಾಗುವುದು ಎಂದು ಸ್ಥಳೀಯಾಡಳಿತ ಹಾಗೂ ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ತರ್ ಅಧ್ಯಕ್ಷತೆಯಲ್ಲಿ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಿರ್ಮಾಣ ಕಾಮಗಾರಿ ಆರಂಭಿಸಲು ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಯುಎಲ್ ಸಿಸಿ ಜತೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಎಲ್ಲಾ ಅರ್ಹ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸೆಲ್ ಕೆಲಸ ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಸಚಿವರು ಹೇಳಿದರು. ಎಂಡೋಸಲ್ಫಾನ್ ಸೆಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪುನರ್ ಸಂಘಟಿಸಲಾದ ಎಂಡೋಸಲ್ಫಾನ್ ಪುನರ್ವಸತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಚಿತ ವಸತಿಗಾಗಿ ಅರ್ಜಿ ಸಲ್ಲಿಸಿದವರಿಂದ ಎಂಡೋಸಲ್ಫಾನ್ ಪಟ್ಟಿಯಲ್ಲಿ ಸೇರ್ಪಡೆಗೊಂಡು ಲಾಟರಿ ಮೂಲಕ ಆಯ್ಕೆಯಾದ 26 ಮಂದಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಅಧೀಕ್ಷಕರು, ಜಿಲ್ಲಾ ಪರಿಶಿಷ್ಟ ಜಾತಿ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡದ ಅಧಿಕಾರಿಗಳನ್ನು ಸೆಲ್ ನಲ್ಲಿ ಸೇರಿಸಲಾಗುವುದು. ಈ ಹಿಂದೆ ಸೆಲ್ ಸದಸ್ಯರಾಗಿದ್ದ ಪ್ರತಿನಿಧಿಗಳನ್ನು ಮತ್ತೊಮ್ಮೆ ಸಕ್ರಿಯರಾಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಸಂಸದ ರಾಜಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್. ಕುಂಞïಂಬು, ಇ. ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಸೆಲ್ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಎಂಡೋಸಲ್ಫಾನ್ ಸೆಲ್ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಸೆಲ್ ಡೆಪ್ಯೂಟಿ ಕಲೆಕ್ಟರ್ ಎಸ್. ಸಾಜಿದ್ ವರದಿ ಮಂಡಿಸಿದರು.