ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಶನಿವಾರ ಬೆಳಗ್ಗೆ ಖಾಸಗಿ ಎಸ್ವಿಟಿ ಬಸ್ ಪಲ್ಟಿ ಆಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 8 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಮತ್ತು ಅಪಘಾತಕ್ಕೀಡಾದವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲು ಮಾಡಲಾಗಿದೆ. ಎಸ್ ವಿಟಿ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಇದಾಗಿದೆ.
ಪಳವಳ್ಳಿ ಕಟ್ಟಿ ಬಳಿ ತಿರುವಿನಲ್ಲಿ ಬಸ್ ಚಲಾಯಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸಾಮರ್ಥ್ಯಕ್ಕೆ ಮೀರಿ ಬಸ್ ನಲ್ಲಿ ವಿಪರೀತ ಜನರನ್ನು ತುಂಬಿಸಿ ವೇಗವಾಗಿ ಚಲಾಯಿಸುತ್ತಿದ್ದುದೇ ಈ ಭಾರೀ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಬಸ್ನ ಮೇಲೆ ಕೂಡ ಸುಮಾರು 40 ಜನ ಕುಳಿತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು, ಸ್ಥಳೀಯ ಶಾಸಕರು ಈಗಾಗಲೇ ಆಗಮಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ನಲ್ಲಿ ಶೀಘ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ಜಮಾಯಿಸಿದ್ದಾರೆ.
ಘಟನೆಗೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿ, ಗಾಯಾಳುಗಳ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದಾರೆ. ಬಸ್ ಮೇಲೆ 40ಕ್ಕೂ ಹೆಚ್ಚು ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಿದ್ದರು. ಗಾಯಾಳುಗಳು ಪಾವಗಡ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರನ್ನು ಬೆಂಗಳೂರಿಗೆ ವರ್ಗಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಪಘಾತವಾದ ಕೂಡಲೇ ಚಾಲಕ, ನಿರ್ವಾಹಕ ಪರಾರಿ ಆಗಿದ್ದಾರೆ. ಖಾಸಗಿ ಬಸ್ ಚಕ್ರಕ್ಕೂ ಸಿಲುಕಿ ಕೆಲವರು ಮೃತಪಟ್ಟಿದ್ದಾರೆ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.