ನವದೆಹಲಿ: ಯುದ್ಧಪೀಡಿತ ಪ್ರದೇಶ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವುದಕ್ಕೆ ಭಾರತ ಸರ್ಕಾರ ಕ್ರಮ ಕೈಗೊಂಡಿದ್ದು ಆಪರೇಷನ್ ಗಂಗಾ ಅಡಿಯಲ್ಲಿ 80 ವಿಮಾನಗಳನ್ನು ನಿಯೋಜಿಸಿದೆ.
ಎರಡು ಡಜನ್ ಗೂ ಹೆಚ್ಚಿನ ಸಚಿವರನ್ನು ರಕ್ಷಣಾ ಕಾರ್ಯಾಚರಣೆ ಮಿಷನ್ ಗೆ ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲದೇ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವ ಹೊಣೆಯನ್ನು ನೀಡಲಾಗಿದೆ.
ಎಎನ್ಐ ಗೆ ಸರ್ಕಾರಿ ಮೂಲಗಳು ಮಾಹಿತಿ ನೀಡಿದ್ದು, ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತಿದ್ದ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮಾ.10 ರ ವೇಳೆಗೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್, ವಿಸ್ತಾರ, ಗೋ ಏರ್, ಏರ್ ಫೋರ್ಸ್ ನ ಹಲವು ಸಂಸ್ಥೆಗಳಿಗೆ ಸೇರಿದ 80 ವಿಮಾನಗಳನ್ನು ನಿಯೋಜಿಸಲಾಗುತ್ತದೆ.
ರೋಮೇನಿಯಾದ ರಾಜಧಾನಿ ಬುಕಾರೆಸ್ಟ್ ನಿಂದ 35 ಸ್ಥಳಾಂತರ ಕಾರ್ಯಾಚರಣೆಯನ್ನು ಕೈಗೊಳ್ಳುವ ಯೋಜನೆ ಹೊಂದಲಾಗಿದೆ. ಏರ್ ಇಂಡಿಯಾದ 14 ವಿಮಾನಗಳು, ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 8 ವಿಮಾನಗಳು ಇಂಡಿಗೋದ 7 ವಿಮಾನಗಳು, ಸ್ಪೈಸ್ ಜೆಟ್ ನ ಒಂದು, ವಿಸ್ತಾರ ವಿಮಾನ ಸಂಸ್ಥೆಯ 3 ವಿಮಾನಗಳು, ಭಾರತೀಯ ವಾಯುಪಡೆಯ 2 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಹಂಗೇರಿಯ ಬುಡಾಪೆಸ್ಟ್ ನಿಂದ 28 ವಿಮಾನಗಳು ಭಾರತೀಯರನ್ನು ಕರೆತರಲಿವೆ. ಇನ್ನು ರ್ಜೆಸ್ಜೋವ್, ಪೋಲೆಂಡ್ ನಿಂದ 9 ವಿಮಾನಗಳು ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಿದ್ದರೆ, ಸುಸೇವಾ ರೊಮೇನಿಯಾದಿಂದ 5 ವಿಮಾನಗಳು, ಕೊಸಿಸ್, ಸ್ಲೋವಾಕಿಯಾದಿಂದ 3 ವಿಮಾನಗಳು ಆಗಮಿಸಲಿವೆ. 80 ವಿಮಾನಗಳ ಮೂಲಕ 17,000 ಭಾರತೀಯರನ್ನು ಯುದ್ಧಪೀಡಿತ ಉಕ್ರೇನ್ ನಿಂದ ರಕ್ಷಿಸಿ ಕರೆತರಲಾಗುತ್ತದೆ.