ನವದೆಹಲಿ: ಯುದ್ಧಗ್ರಸ್ತ ಉಕ್ರೇನ್ ನಿಂದ ಈ ವರೆಗೂ 8000 ಮಂದಿ ಭಾರತೀಯರು ಉಕ್ರೇನ್ ನಿಂದ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
"ಕಳೆದ ತಿಂಗಳು ಕೀವ್ ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯಿಂದ ಮೊದಲ ಸಲಹೆ (ಅಡೈಸರಿ) ಬಂದ ಬಳಿಕ ಈ ವರೆಗೂ 8000 ಮಂದಿ ಭಾರತೀಯರು ವಾಪಸ್ಸಾಗಿದ್ದಾರೆ" ಎಂದು ಸರ್ಕಾರ ತಿಳಿಸಿದೆ
ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದ ಬಳಿಕ ಈ ವರೆಗೂ 6 ವಿಮಾನಗಳು ಕಾರ್ಯಾಚರಣೆ ನಡೆಸಿ ಭಾರತಕ್ಕೆ ವಾಪಸ್ಸಾಗಿವೆ. 1396 ವಿದ್ಯಾರ್ಥಿಗಳನ್ನು ವಾಪಸ್ ಕರೆತರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಬುದಾಪೆಸ್ಟ್ ನಿಂದ ನಾಲ್ಕು ವಿಮಾನಗಳು, ರೊಮೇನಿಯಾದಿಂದ 2 ವಿಮಾನಗಳು ಬಂದಿವೆ. ಈ ಕಾರ್ಯಾಚರಣೆಗೆ ಸರ್ಕಾರವೇ ವೆಚ್ಚವನ್ನು ಭರಿಸುತ್ತಿದೆ. ಇದಕ್ಕಾಗಿ ಯಾರೂ ಹಣ ನೀಡುವ ಅಗತ್ಯವಿಲ್ಲ ಎಂದು ಎಂಇಎ ವಕ್ತಾರ ಅರಿಂದಮ್ ಬಗಾಚಿ ತಿಳಿಸಿದ್ದಾರೆ.