ಸೌದಿ: ಎಂಥ ಕಠೋರ ಅಪರಾಧ ಎಸಗಿದರೂ ಗಲ್ಲು ಶಿಕ್ಷೆ ವಿಧಿಸುವಾಗ ನ್ಯಾಯಾಲಯಗಳು ಹಲವಾರು ಬಾರಿ ಯೋಚಿಸುವುದುಂಟು. ಆದರೆ ಘನಘೋರ ಕೃತ್ಯ ಎಸಗಿದವರಿಗೆ, ದೇಶದ್ರೋಹ ಮಾಡಿದವರಿಗೆ ಅತ್ಯಂತ ಕಠೋರ ಶಿಕ್ಷೆ ನೀಡುತ್ತವೆ ಕೆಲವು ದೇಶಗಳು. ಅಂಥದ್ದರಲ್ಲಿ ಸೌದಿ ಅರೇಬಿಯಾ ಕೂಡ ಒಂದು.
ಅದೇ ರೀತಿ, ಒಂದೇ ದಿನ 81 ಮಂದಿ ಉಗ್ರರನ್ನು ಸೌದಿ ಅರೇಬಿಯಾದಲ್ಲಿ ಗಲ್ಲಿಗೇರಿಸಲಾಗಿದೆ. ವಿವಿಧ ರೀತಿಯ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ, ದೇಶದ್ರೋಹ ಮಾಡಿರುವವರಿಗೆ ಮರಣ ದಂಡನೆ ವಿಧಿಸಲಾಗಿದೆ. 1980ರಲ್ಲಿ ಉಗ್ರಗಾಮಿಗಳು ಗ್ರ್ಯಾಂಡ್ ಮಸೀದಿಯನ್ನು ವಶಪಡಿಸಿಕೊಂಡ ಒಂದು ವರ್ಷದ ನಂತರ ಸೌದಿಯಲ್ಲಿ ಒಂದೇ ದಿನದಲ್ಲಿ 63 ಜನರನ್ನು ಗಲ್ಲಿಗೇರಿಸಲಾಗಿತ್ತು. ಪ್ರಮುಖ ಶಿಯಾ ಮುಸ್ಲಿಂ ಧರ್ಮಗುರು ನಿಮರ್ ಅಲ್-ನಿಮ್ರ್ ಸೇರಿದಂತೆ ಒಟ್ಟು 47 ಜನರನ್ನು 2016ರಲ್ಲಿ ಒಂದೇ ದಿನದಲ್ಲಿ ಗಲ್ಲಿಗೇರಿಸಲಾಗಿತ್ತು. 2021ರಲ್ಲಿ 69 ಮಂದಿ ಈ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಇದೀಗ 81 ಮಂದಿಯನ್ನು ಒಂದೇ ದಿನ ಗಲ್ಲುಶಿಕ್ಷೆ ವಿಧಿಸುವ ಮೂಲಕ ದಾಖಲೆ ಸೃಷ್ಟಿಯಾಗಿದೆ.
13 ನ್ಯಾಯಾಧೀಶರಿಂದ 3 ಹಂತಗಳಲ್ಲಿ ವಿಚಾರಣೆ ನಡೆದು ಇಂಥದ್ದೊಂದು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೆ ಒಳಗಾದವರಲ್ಲಿ 73 ಸೌದಿ ಅರೇಬಿಯಾ ದೇಶದ ಪ್ರಜೆಗಳು, 7 ಮಂದಿ ಯೆಮನ್ ದೇಶದ ಪ್ರಜೆಗಳು ಹಾಗೂ ಒಬ್ಬ ಸಿರಿಯಾ ದೇಶದ ಪ್ರಜೆ ಆಗಿದ್ದಾನೆ. ಪ್ರತಿ ಆರೋಪಿಗಳಿಗೂ ಮೂರು ಪ್ರತ್ಯೇಕ ಹಂತಗಳಲ್ಲಿ ವಿಚಾರಣೆ ನಡೆದಿದ್ದು, 13 ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದ್ದಾರೆ. ಈ ವಿಚಾರಣೆಯಲ್ಲಿ 81 ಮಂದಿಯ ಅಪರಾಧವೂ ಸಾಬೀತಾಗಿತ್ತು.
ಇವರೆಲ್ಲರ ವಿರುದ್ಧ ಭಯೋತ್ಪಾದನೆ, ಉಗ್ರವಾದ, ದೇಶದ್ರೋಹ, ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಅರಮನೆಗೆ ಬಾಂಬ್‌ಗಳನ್ನು ಎಸೆದಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಇತ್ತು. ಜತೆಗೆ, ಕೆಲವರ ವಿರುದ್ಧ ಸರ್ಕಾರಿ ಸಿಬ್ಬಂದಿ ಹಾಗೂ ಪ್ರಮುಖ ಆರ್ಥಿಕ ಸ್ಥಳಗಳನ್ನು ಗುರಿ ಮಾಡಿ ದಾಳಿ ಮಾಡಿದ್ದು, ಕಾನೂನು ಜಾರಿ ಅಧಿಕಾರಿಗಳನ್ನು ಕೊಲೆ ಮಾಡಿ ಅವರ ದೇಹಗಳನ್ನು ಛಿದ್ರಗೊಳಿಸಿದ್ದು, ವಾಹನಗಳನ್ನು ಗುರಿಯಾಗಿಸಿ ನೆಲ ಬಾಂಬುಗಳನ್ನು ಅಳವಡಿಸಿದ ಪ್ರಕರಣಗಳು ಇದ್ದವು. ವಿಚಾರಣೆ ವೇಳೆ ಎಲ್ಲಾ ಆರೋಪಗಳೂ ಸಾಬೀತಾಗಿದ್ದವು
81 ಮಂದಿಯ ಪೈಕಿ ಕೆಲವರು ಐಸಿಸ್ (ಇಸ್ಲಾಮಿಕ್ ಸ್ಟೇಟ್), ಅಲ್ ಕೈದಾ ಮತ್ತು ಹೌತಿಗಳಂತಹ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ. ಕೆಲವರು ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಯತ್ನಿಸಿದವರೂ ಇದ್ದಾರೆ.