ನವದೆಹಲಿ :ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮರುಸ್ಪರ್ಧಿಸಿರುವ ಶೇ.90ಕ್ಕೂ ಅಧಿಕ ಶಾಸಕರ ಆಸ್ತಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದ್ದು,ಬಿಜೆಪಿ ಅಭ್ಯರ್ಥಿಗಳ ಆಸ್ತಿಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಪಕ್ಷೇತರರೂ ಸೇರಿದಂತೆ ಇಂತಹ ಅಭ್ಯರ್ಥಿಗಳು 2017ರಲ್ಲಿ ಸರಾಸರಿ 5.68 ಕೋ.ರೂ.ಮೌಲ್ಯದ ಆಸ್ತಿಗಳನ್ನು ಹೊಂದಿದ್ದರು. 2022ರಲ್ಲಿ ಈ ಅಭ್ಯರ್ಥಿಗಳು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ಗಳಂತೆ ಅವರ ಸರಾಸರಿ ಆಸ್ತಿಯ ಮೌಲ್ಯ 8.87 ಕೋ.ರೂ.ಗೆ ಏರಿಕೆಯಾಗಿದೆ.
2017ರಿಂದ ಆಸ್ತಿಗಳ ಮೌಲ್ಯ ಗಣನೀಯವಾಗಿ ಹೆಚ್ಚಾಗಿರುವ ಕಣದಲ್ಲಿರುವ ಐವರು ಅಗ್ರ ಅಭ್ಯರ್ಥಿಗಳಲ್ಲಿ ಬಿಜೆಪಿಯ ಅದಿತಿ ಸಿಂಗ್ (ರಾಯಬರೇಲಿ) ಸೇರಿದ್ದು,2017ರಲ್ಲಿ 13.98 ಲ.ರೂ.ಗಳಿದ್ದ ಅವರ ಆಸ್ತಿಯ ಮೌಲ್ಯ 2022ರಲ್ಲಿ 30.98 ಕೋ.ರೂ.ಗೇರಿದೆ. ಅಂದರೆ ಐದು ವರ್ಷಗಳಲ್ಲಿ ಅವರ ಆಸ್ತಿಯ ಮೌಲ್ಯ 30.85 ಕೋ.ರೂ.ಗಳಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡಿರುವ ಸಿಂಗ್ 2017ರ ವಿಧಾನಸಭಾ ಚುನಾವಣೆಗಳಲ್ಲಿ ರಾಯಬರೇಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದಿದ್ದರು.
ವರದಿಯು ತಿಳಿಸಿರುವಂತೆ ಮುಬಾರಕ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಐಎಂಐಎಂ ಅಭ್ಯರ್ಥಿ ಗುಡ್ಡು ಜಮಾಲಿ ಎಂದೇ ಜನಪ್ರಿಯರಾಗಿರುವ ಶಾ ಆಲಂ ಅವರು 195.85 ಕೋ.ರೂ.ಗಳ ಆಸ್ತಿಯನ್ನು ಘೋಷಿಸಿದ್ದು,ಆಸ್ತಿಯ ಮೌಲ್ಯ ಕಳೆದ ಐದು ವರ್ಷಗಳಲ್ಲಿ 77.09 ಕೋ.ರೂ.ಗಳಷ್ಟು ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿರುವ ಬಿಜೆಪಿಯ ಚಾರ್ಪೌಲಿ ಕ್ಷೇತ್ರದ ಅಭ್ಯರ್ಥಿ ಸಹೇಂದರ್ ಸಿಂಗ್ ರಮಾಲಾರ ಆಸ್ತಿಯ ವೌಲ್ಯ 2017ರಲ್ಲಿ 38.04 ಕೋ.ರೂ.ಇದ್ದದು 2022ರಲ್ಲಿ 84.50 ಕೋ.ರೂ.ಗೆ ಏರಿಕೆಯಾಗಿದೆ.
ಫೂಲ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರವೀಣ ಪಟೇಲ್ ಅವರ ಆಸ್ತಿಯ ಮೌಲ್ಯ 2017ರಲ್ಲಿ 8.26 ಕೋ.ರೂ.ಇದ್ದುದು 2022ರಲ್ಲಿ 40.26 ಕೋ.ರೂ.ಗೇರಿದೆ ಎಂದು ವರದಿಯು ತಿಳಿಸಿದೆ.
ಪಕ್ಷವಾರು ವಿಶ್ಲೇಷಣೆಯಂತೆ ಪುನರಾಯ್ಕೆ ಬಯಸಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿಗಳ ಒಟ್ಟು ಆಸ್ತಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಏರಿಕೆಯಾಗಿದೆ. ಪುನರಾಯ್ಕೆ ಬಯಸಿರುವ ಬಿಜೆಪಿಯ 223 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2017ರಲ್ಲಿ 5.27 ಕೋ.ರೂ.ಇದ್ದುದು 2022ರಲ್ಲಿ 8.43 ಕೋ.ರೂ.ಗೆ ಬೆಳೆದಿದೆ.
ಸಮಾಜವಾದಿ ಪಾರ್ಟಿ ನಂತರದ ಸ್ಥಾನದಲ್ಲಿದ್ದು,ಪುನರಾಯ್ಕೆ ಬಯಸಿರುವ ಅದರ 55 ಅಭ್ಯರ್ಥಿಗಳ ಸರಾಸರಿ ಆಸ್ತಿಯ ಮೌಲ್ಯ 2017ರಲ್ಲಿ 4.60 ಕೋ.ರೂ.ಇದ್ದುದು 2022ರಲ್ಲಿ 6.73 ಕೋ.ರೂ.ಗೆ ಏರಿದೆ. ಪುನರಾಯ್ಕೆ ಬಯಸಿ ಕಣದಲ್ಲಿರುವ ಬಿಎಸ್ಪಿಯ ಎಂಟು ಅಭ್ಯರ್ಥಿಗಳ ಸರಾಸರಿ ಆಸ್ತಿಯ ಮೌಲ್ಯ ಈ ಐದು ವರ್ಷಗಳಲ್ಲಿ 9.82 ಕೋ.ರೂ.ಗಳಿಂದ 14.48 ಕೋ.ರೂ.ಗೇರಿದೆ. ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳು ಪುನರಾಯ್ಕೆ ಬಯಸಿ ಕಣದಲ್ಲಿದ್ದು,ಅವರ ಸರಾಸರಿ ಆಸ್ತಿ ಮೌಲ್ಯ 8.84 ಕೋ.ರೂ.ಗಳಿಂದ 9.80 ಕೋ.ರೂ.ಗೆ ಬೆಳೆದಿದೆ.