ನವದೆಹಲಿ :ಭಾರತದ ಶೇಕಡ 93ರಷ್ಟು ಮಂದಿ ವಾಯುಮಾಲಿನ್ಯ ಅಧಿಕ ಇರುವ ಅಂದರೆ ಅಪಾಯಕಾರಿ ಮಾಲಿನ್ಯಕಾರಕ ಕಣಗಳು ಪಿಎಂ 2.5 ಮಟ್ಟಕ್ಕಿಂತ ಅಧಿಕ ಇರುವ ಪ್ರದೇಶಗಳಲ್ಲಿ ವಾಸವಿದ್ದಾರೆ. ಹಾಗು ಇದು ದೇಶದ ಜನರ ನಿರೀಕ್ಷಿತ ಜೀವಿತಾವಧಿಯನ್ನು ಕನಿಷ್ಠ 1.5 ವರ್ಷ (ಕ್ಯಾನ್ಸರ್‌ಗಿಂತಲೂ ಅಧಿಕ) ಕುಗ್ಗಿಸಲಿದೆ ಎಂಬ ಆತಂಕಕಾರಿ ಅಂಶವನ್ನು ಅಮೆರಿಕ ಮೂಲದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್ (ಎಚ್‌ಇಐ) ವರದಿ ಬಹಿರಂಗಪಡಿಸಿದೆ.
ವಿಶ್ವದಲ್ಲಿ ಸಂಭವಿಸುತ್ತಿರುವ ಪ್ರತಿ ಒಂಬತ್ತು ಸಾವಿನ ಪೈಕಿ ಒಂದು ಸಾವು ವಾಯುಮಾಲಿನ್ಯದ ಕಾರಣದಿಂದ ಸಂಭವಿಸುತ್ತಿದೆ ಎಂದು ವರದಿ ಹೇಳಿದೆ.
ಅತ್ಯಂತ ವಾಯುಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ. ಈಜಿಪ್ಟ್, ಪಾಕಿಸ್ತಾನ, ಬಾಂಗ್ಲಾದೇಶ ಮೊದಲ ಮೂರು ಸ್ಥಾನಗಳಲ್ಲಿದ್ದು, ಈ ದೇಶಗಳ ಶೇಕಡ 100ರಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ನೈಜೀರಿಯಾದಲ್ಲಿ ಶೇಕಡ 95ರಷ್ಟು ಮಂದಿ ಅಧಿಕ ಸೂಕ್ಷ್ಮ ಮಾಲಿನ್ಯಕಾರಕ ಕಣಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಪ್ರತಿ ಘನ ಮೀಟರ್‌ಗೆ 5 ಮೈಕ್ರೊಗ್ರಾಂ ಮಾತ್ರ ಮಾಲಿನ್ಯಕಾರಕ ಕಣಗಳು ಇರಬಹುದು. ಆದರೆ ವಿಶ್ವದ ಯಾವ ದೇಶವೂ ಇದಕ್ಕಿಂತ ಕಡಿಮೆ ಪ್ರಮಾಣದ ಮಾಲಿನ್ಯಕಾರಕ ಕಣ ಹೊಂದಿಲ್ಲ.
ಅಮೆರಿಕದ ಪರಿಸರ ಸಂರಕ್ಷಣಾ ಏಜೆನ್ಸಿ, ಉದ್ಯಮಗಳು ಮತ್ತು ಅಭಿವೃದ್ಧಿ ಬ್ಯಾಂಕ್‌ಗಳ ನೆರವಿನಿಂದ ಕಾರ್ಯ ನಿರ್ವಹಿಸುತ್ತಿರುವ ಎಚ್‌ಇಐ ಪ್ರಕಾರ, 2019ರಲ್ಲಿ ಪಿಎಂ2.5 ಕಣಗಳ ಸಂಖ್ಯೆ ಘನ ಮೀಟರ್‌ಗೆ 83 ಇದ್ದು, ಸೂಕ್ಷ್ಮ ಮಾಲಿನ್ಯಕಾರಕ ಕಣಗಳಿಂದಾಗಿ ಭಾರತದಲ್ಲಿ 9.80 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.
"ಭಾರತದಲ್ಲಿ ನಿರೀಕ್ಷಿತ ಜೀವಿತಾವಧಿ ಪಿಎಂ 2.5 ಕಣಗಳಿಂದ 1.5 ವರ್ಷ ಕುಸಿಯಲಿದ್ದು, ಇದು ಕ್ಯಾನ್ಸರ್ ಕಾರಣದಿಂದ ಕಡಿಮೆಯಾಗುವ ನಿರೀಕ್ಷಿತ ಜೀವಿತಾವಧಿ (1.39 ವರ್ಷ) ಗಿಂತ ಅಧಿಕ ಎಂದು ವರದಿ ಹೇಳಿದೆ. ಇದು ಮಾನವ ಆರೋಗ್ಯ ಮತ್ತು ಧೀರ್ಘಾಯುಷ್ಯಕ್ಕೆ ದೊಡ್ಡ ಅಪಾಯ ಎಂದು ವರದಿ ವಿಶ್ಲೇಷಿಸಿದೆ.