ನವದೆಹಲಿ: ಈಶಾನ್ಯ ರಾಜ್ಯಗಳ ದಶಕಗಳ ಕಾಲದ ಬೇಡಿಕೆಯನ್ನು ಕೊನೆಗೂ ಕೇಂದ್ರ ಸರ್ಕಾರ ಈಡೇರಿಸಿದ್ದು, AFSPA ನಿಯಮದಡಿಯಲ್ಲಿನ ಪ್ರಕ್ಷುಬ್ದ ಪ್ರದೇಶಗಳ ಸಂಖ್ಯೆಯನ್ನು ಕಡಿತ ಮಾಡಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಗೆ (ಆಫ್‌ಸ್ಪ) ಒಳಪಡುವ ಪ್ರದೇಶವನ್ನು ಕೇಂದ್ರ ಸರ್ಕಾರವು ಗುರುವಾರ ಕಡಿಮೆ ಮಾಡಿದೆ. ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮಣಿಪುರದಲ್ಲಿ ಹಲವು ವರ್ಷಗಳ ಬಳಿಕ ಆಫ್‌ಸ್ಪ ನಿಯಂತ್ರಿತ ಪ್ರದೇಶವು ಕಡಿತಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಉತ್ತಮಗೊಂಡಿರುವ ಭದ್ರತಾ ಪರಿಸ್ಥಿತಿ, ಸತತ ಪ್ರಯತ್ನಗಳ ಫಲವಾಗಿ ವೇಗ ಪಡೆದಿರುವ ಅಭಿವೃದ್ಧಿ ಕಾರ್ಯಗಳು, ಬಂಡಾಯ ಶಮನಗೊಳಿಸಲು ನಡೆಸಿರುವ ಹಲವು ಒಪ್ಪಂದಗಳು ಹಾಗೂ ಈಶಾನ್ಯ ಭಾಗದಲ್ಲಿ ಮರೆಯಾಗಿರುವ ಶಾಂತಿಯನ್ನು ಮರಳಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿರುವ ಪ್ರಯತ್ನಗಳ ಫಲವಾಗಿ ಆಫ್‌ಸ್ಪಗೆ ಒಳಪಟ್ಟಿರುವ ವಲಯ ಕಡಿತಗೊಂಡಿದೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ AFSPA ಅಡಿಯಲ್ಲಿ ಪ್ರದೇಶಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, AFSPA ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 1990 ರಿಂದ ಇಡೀ ಅಸ್ಸಾಂನಲ್ಲಿ ಅಸ್ತವ್ಯಸ್ತಗೊಂಡ ಪ್ರದೇಶದ ಅಧಿಸೂಚನೆ ಜಾರಿಯಲ್ಲಿದೆ. ಈ ಹೆಜ್ಜೆಯೊಂದಿಗೆ, ಅಸ್ಸಾಂನ 23 ಜಿಲ್ಲೆಗಳನ್ನು ಈಗ ಸಂಪೂರ್ಣವಾಗಿ ಮತ್ತು ಒಂದು ಜಿಲ್ಲೆಯನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ AFSPA ಪರಿಣಾಮದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.