ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ವಿಚಾರದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ರಷ್ಯಾ ಉಕ್ರೇನ್ ಆಕ್ರಮಣ ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನ ನಡೆಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಮತದಾನ ಮಾಡುವುದರಿಂದ ವಾರದಲ್ಲಿ ಎರಡನೇ ಬಾರಿ ಭಾರತ ದೂರ ಉಳಿದಿದೆ. ಅಲ್ಲದೇ, ಬೆಲಾರೂಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಣ ಮಾತುಕತೆ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.
ಉಕ್ರೇನ್ ಆಕ್ರಮಣ ಕುರಿತು ರಷ್ಯಾ ವಿರುದ್ಧ ಬಹುತೇಕ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದ್ದರೂ ಭಾರತ ಈವರೆಗೂ ಜಾಣನಡೆ ಅನುಸರಿಸುತ್ತಾ ಬಂದಿದೆ. ಇದಕ್ಕೆ ಪ್ರಮುಖ ಐದು ಕಾರಣಗಳು ಇಂತಿದೆ.
* ಹಳೆಯ ಗೆಳೆಯ ರಷ್ಯಾ ಮತ್ತು ಪಶ್ಚಿಮದಲ್ಲಿನ ಹೊಸ ಗೆಳೆಯನ ಒತ್ತಡದಿಂದಾಗಿ ಭಾರತದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಾಗಿದೆ.
* ರಷ್ಯಾ ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ಪೂರೈಸುವ ದೊಡ್ಡ ರಾಷ್ಟ್ರವಾಗಿದೆ. ಅಲ್ಲದೇ, ಬ್ಯಾಲಸ್ಟಿಕ್ ಕ್ಷಿಪಣಿ ಉಡಾಯಿಸುವ ಜಲಂತರ್ಗಾಮಿಯನ್ನು ಭಾರತಕ್ಕೆ ಪೂರೈಸಿದೆ
* ರಷ್ಯಾ ನಿರ್ಮಿತ 272 ಸು 30 ಯುದ್ದ ವಿಮಾನಗಳು ಭಾರತದಲ್ಲಿವೆ. ಇದು ಎಂಟು ರಷ್ಯಾ ನಿರ್ಮಿತ ಕಿಲೋ ವರ್ಗದ ಜಲಂತರ್ಗಾಮಿ ಮತ್ತು 1,300ಕ್ಕೂ ಹೆಚ್ಚು ರಷ್ಯಾದ ಟಿ-90 ಟ್ಯಾಂಕ್ ಗಳನ್ನು ಹೊಂದಿದೆ.
* ಅಮೆರಿಕದ ಒತ್ತಡದ ಹೊರತಾಗಿಯೂ ರಷ್ಯಾದಿಂದ ಎಸ್ -400 ಏರ್ ಡಿಪೆನ್ಸ್ ಸಿಸ್ಟಮ್ ಅನ್ನು ಭಾರತ ಖರೀದಿಸಿದೆ. ಕ್ಷಿಪಣಿ ವ್ಯವಸ್ಥೆ ಖರೀದಿಗಾಗಿ ಭಾರತ ರಷ್ಯಾದೊಂದಿಗೆ 2018ರಲ್ಲಿ 5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎಲ್ಲಾ ವಿಷಯಗಳಲ್ಲಿ ಭಾರತವನ್ನು ರಷ್ಯಾ ಬೆಂಬಲಿಸಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಇವೆಲ್ಲಾ ಕಾರಣಗಳಿಂದ ಭಾರತ ಉಕ್ರೇನ್ ವಿಚಾರದಲ್ಲಿ ಜಾಣ ನಡೆ ಇಟ್ಟಿದ್ದು, ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.