ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸುವುದು ಸಹ ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಉದ್ದ ಗಡ್ಡ ಬಿಟ್ಟು, ಅದಕ್ಕೆ ಬೇಕಾದ ಶೇಪ್ ನೀಡಿ, ಇಂದಿನ ಯುವಕರು ಖುಷಿಪಡುತ್ತಾರೆ. ಆದರೆ, ಆ ಗಡ್ಡವನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ತಲೆಯ ಕೂದಲಿನಂತೆ, ಗಡ್ಡದ ಕೂದಲಿನ ಕಾಳಜಿ ವಹಿಸುವುದು ಸಹ ಮುಖ್ಯ.
ಅಂದಹಾಗೇ, ಗಡ್ಡದ ಕೂದಲನ್ನು ಆಂಡ್ರೊಜೆನಿಕ್ ಕೂದಲು ಎಂದು ಕರೆಯಲಾಗುತ್ತದೆ, ಅಂದರೆ ಅದರ ಬೆಳವಣಿಗೆಗೆ ಟೆಸ್ಟೋಸ್ಟೆರಾನ್ ಕಾರಣ. ಹೆಚ್ಚು ಟೆಸ್ಟೋಸ್ಟೆರಾನ್ ಈ ಕೂದಲಿನ ಹೆಚ್ಚು ಬೆಳವಣಿಗೆ ಮತ್ತು ದಪ್ಪವಾಗಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಗಡ್ಡವನ್ನು ನಿಮ್ಮ ದೇಹದ ಇತರ ಕೂದಲುಗಳಿಗಿಂತ ವಿಭಿನ್ನವಾಗಿ ಕಾಳಜಿ ವಹಿಸಬೇಕು. ಇದರಿಂದ ನೀವು ಚರ್ಮದ ಸೋಂಕಿನಿಂದ ಪಾರಾಗಬಹುದು. ಇಲ್ಲವಾದಲ್ಲಿ ಆಗಾಗ ಗಡ್ಡದಲ್ಲಿ ತುರಿಕೆ, ಕಜ್ಜಿ ಉಂಟಾಗುವುದು. ಆದ್ದರಿಂದ ಗಡ್ಡದ ಅರೈಕೆ ಹೇಗಿರಬೇಕು ಎಂಬುದನ್ನು ಇಲ್ಲಿ ನೋಡೋಣ.
ಗಡ್ಡದಲ್ಲಿ ತುರಿಕೆ ಅಥವಾ ಕಜ್ಜಿ ಉಂಟಾಗಲು ಕಾರಣವೇನು?:
ಗಡ್ಡದ ತುರಿಕೆಯ ಕಾರಣವು ನೈಸರ್ಗಿಕ ಪ್ರಕ್ರಿಯೆಗಳಿಂದ ಹಿಡಿದು, ಗಂಭೀರ ಸೋಂಕಿನವರೆಗೆ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಶುಷ್ಕತೆಯಿಂದಾಗಿ ತುರಿಕೆಗಳು ಸಾಮಾನ್ಯವಾಗಿರುತ್ತದೆ. ಇದರ ಜೊತೆಗೆ ಗಡ್ಡ ಅಥವಾ ಮೀಸೆ ಬೆಳೆಯುವುದು, ಒಣ ತ್ವಚೆ, ಬೆಳೆದ ಕೂದಲು, ಫೋಲಿಕ್ಯುಲೈಟಿಸ್, ಸೆಬೊರ್ಹೆಕ್ ಡರ್ಮಟೈಟಿಸ್ ಮುಂತಾದ ಚರ್ಮ ಸಮಸ್ಯೆಗಳು ಗಡ್ಡದಲ್ಲಿ ತುರಿಕೆಗೆ ಕಾರಣವಾಗಬಹುದು.
ಗಡ್ಡದ ತುರಿಕೆಗೆ ಹೇಗೆ ಚಿಕಿತ್ಸೆ ಮಾಡಬಹುದು?:
ಗಡ್ಡದಲ್ಲಿ ತುರಿಕೆ ಸಾಮಾನ್ಯ ಕಾರಣಗಳಿಂದ ಹುಟ್ಟಿಕೊಂಡಿದ್ದರೆ, ನಿಯಮಿತವಾಗಿ ಸ್ನಾನ ಮಾಡುವ ಮೂಲಕ ಮತ್ತು ನಿಮ್ಮ ಮುಖದ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ಚಿಕಿತ್ಸೆ ನೀಡಬಹುದು. ಇತರ ಚರ್ಮ ಸಂಬಂಧಿತ ಕಾರಣಗಳಿಂದಾಗಿ ತುರಿಕೆ ಹುಟ್ಟಿಕೊಂಡಿದ್ದರೆ, ಅದರ ಮೂಲಕ್ಕೆ ಚಿಕಿತ್ಸೆ ನೀಡಲು ಔಷಧಿ ಅಥವಾ ವಿಶೇಷ ಪ್ರತಿಜೀವಕಗಳ ಅಗತ್ಯವಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಗಡ್ಡದಲ್ಲಿ ತುರಿಕೆ ಕಡಿಮೆ ಮಾಡಲು ಈ ಸಲಹೆಗಳನ್ನು ಅನುಸರಿಸಿ: ಎಣ್ಣೆ, ಕೊಳಕು ಮತ್ತು ಬ್ಯಾಕ್ಟೀರಿಯಾಗಳ ಸಂಗ್ರಹವನ್ನು ತಡೆಯಲು ನಿಮ್ಮ ಮುಖ ಮತ್ತು ಗಡ್ಡವನ್ನು ಸ್ವಚ್ಛವಾಗಿಡುವುದು ತುಂಬಾ ಮುಖ್ಯ. ಏಕೆಂದರೆ ಇವುಗಳೇ ತುರಿಕೆ ಉಂಟಾಗಲು ಮುಖ್ಯ ಕಾರಣವಾಗಿರುತ್ತದೆ. ಆದ್ದರಿಂದ ಗಡ್ಡದ ನೈರ್ಮಲ್ಯ ಕಾಪಾಡಿಕೊಳ್ಳಲು ಈ ವಿಷಯಗಳನ್ನು ಅನುಸರಿಸುವುದನ್ನು ಮರೆಯಬೇಡಿ: ದಿನಕ್ಕೆ ಒಮ್ಮೆಯಾದರೂ ಸ್ನಾನ ಮಾಡಿ. ನಿರ್ದಿಷ್ಟ ಕಾರಣಗಳಿಂದ ಸ್ನಾನ ಮಾಡಲಾಗದಿದ್ದರೆ, ಪ್ರತಿದಿನ ಗಡ್ಡವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಗಡ್ಡದ ಕೂದಲಿಗೆ ವಿಶೇಷವಾಗಿ ತಯಾರಿಸಲಾದ ಫೇಸ್ ವಾಶ್ ಅಥವಾ ಗಡ್ಡದ ವಾಶ್ ಬಳಸಿ. ನಿಮ್ಮ ಗಡ್ಡದ ಕೂದಲನ್ನು ನೈಸರ್ಗಿಕವಾಗಿ ಎಣ್ಣೆಯುಕ್ತವಾಗಿರಿಸಲು ಜೊಜೊಬಾ ಎಣ್ಣೆ ಅಥವಾ ಅರ್ಗಾನ್ ಎಣ್ಣೆಯನ್ನು ಒಳಗೊಂಡಿರುವ ಗಡ್ಡದ ಕಂಡಿಷನರ್ ಅನ್ನು ಬಳಸಿ. ಗಡ್ಡಕ್ಕೆ ಹೊಸ ಎಣ್ಣೆ ಅಥವಾ ಕಂಡಿಷನರ್ ಅನ್ನು ಬಳಸುತ್ತಿರುವಾಗ, ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯದಿರಿ. ಇದರಿಂದ ಮೊಡವೆ ಅಥವಾ ಯಾವುದೇ ರೀತಿಯ ಅಲರ್ಜಿಯನ್ನು ತಪ್ಪಿಸಬಹುದು. ಹೆಚ್ಚು ಹೊತ್ತು ಸ್ನಾನ ಮಾಡಬೇಡಿ ಮತ್ತು ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಗಡ್ಡವನ್ನು ಶೇವ್ ಮಾಡಿದಾಗ ಅಥವಾ ಟ್ರಿಮ್ ಮಾಡಿದಾಗ, ನೈಸರ್ಗಿಕ ಆಫ್ಟರ್ ಶೇವ್ ವಾಶ್ ಬಳಸಿ.