ನವದೆಹಲಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವು 'ತುಂಬಾ ಗಂಭೀರ' ವಿಚಾರವಾಗಿದ್ದು, ಇದು ಅಂತರರಾಷ್ಟ್ರೀಯ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫುಮಿಯೊ ಕಿಷಿಡ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಮಾತುಕತೆ ಬಳಿಕ ಭಾರತ ಮತ್ತು ಜಪಾನ್ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿವೆ.
'ತನ್ನ ಬಲಿಷ್ಠ ಸೇನಾ ಪಡೆಯನ್ನು ಬಳಸಿಕೊಂಡು ಯಾವುದೇ ದೇಶದ ಮೇಲೆ ದಾಳಿ ನಡೆಸುವುದನ್ನು ಸಹಿಸಲು ಆಗುವುದಿಲ್ಲ. ಉಕ್ರೇನ್‍ನಲ್ಲಿ ತಲೆದೋರಿರುವ ಸಂಘರ್ಷ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರು ಕಳವಳ ವ್ಯಕ್ತಪಡಿಸಿದರು.
ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಕೂಡಲೇ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ನಾಯಕರು, ಉಕ್ರೇನ್‌ನಲ್ಲಿ ತಲೆದೋರಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
ಭಾರತ-ಜಪಾನ್ 14ನೇ ಮಾತುಕತೆಯ ಬಳಿಕ ಮೋದಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಲ ಪ್ರಯೋಗಿಸಿ ಒಂದು ರಾಷ್ಟ್ರದ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಕ್ಕೆ ಅವಕಾಶವನ್ನು ನೀಡಬಾರದು. ಉಕ್ರೇನ್ ಸಮಸ್ಯೆ ನಿವಾರಣೆಗೆ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆೃ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ನೇರವಾಗಿ ಉಲ್ಲೇಖಿಸದ ಪ್ರಧಾನಿ ನರೇಂದ್ರ ಮೋದಿ, ಸದ್ಯದ ಭೌಗೋಳಿಕ ರಾಜಕೀಯ ಘಟನೆಗಳು ನಮ್ಮೆದುರು ಹೊಸ ಸವಾಲುಗಳನ್ನು ತಂದೊಡ್ಡಿವೆ ಎಂದರು.
ಬಲವಂತದಿಂದ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಯಾವುದೇ ವಲಯದಲ್ಲಿ ಅನುಮತಿಸಲಾಗುವುದಿಲ್ಲ ಎಂದು ನಾನು ಮೋದಿಗೆ ಹೇಳಿದೆ. ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಎಲ್ಲಾ ಸಂಘರ್ಷಗಳಿಗೆ ಶಾಂತಿಯುತ ಪರಿಹಾರದ ಅಗತ್ಯವನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ.
ಅಲ್ಲದೆ, ಭಾರತ-ಜಪಾನ್ ಬಾಂಧವ್ಯವನ್ನು ಗಾಢಗೊಳಿಸುವುದರಿಂದ ಉಭಯ ದೇಶಗಳಿಗೆ ಪ್ರಯೋಜನವಾಗುವುದಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆ ಉತ್ತೇಜಿಸಲು ನೆರವಾಗಲಿದೆ ಎಂದು ಮೋದಿ ಹೇಳಿದರು.
ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಜಪಾನ್ ರಷ್ಯಾವನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಪರಿಹರಿಸುವತ್ತ ಚಿಂತನ ಹರಿಸಿದೆ.