ಆಗ್ನೇಯ ಏಷ್ಯಾ ಮತ್ತು ಯುರೋಪ್‍ನಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ `ಟೆಸ್ಟ್, ಟ್ರ್ಯಾಕ್, ಟ್ರೀಟ್, ಕೋವಿಡ್ ನಿಯಮಗಳ ಪಾಲನೆ ಮತ್ತು ಲಸಿಕೆ ನೀಡಿಕೆ'' ಇವುಗಳತ್ತ ಹೆಚ್ಚಿನ ಗಮನ ವಹಿಸುವಂತೆ ಸೂಚಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಹೊಸ ರೂಪಾಂತರಿಗಳನ್ನು ಸಕಾಲದಲ್ಲಿ ಪತ್ತೆ ಹಚ್ಚುವಂತಾಗಲು ನಿಯಮಿತವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ ಹಾಗೂ ಜನರಿಗೆ ಕೋವಿಡ್ ಲಸಿಕೆ ಪಡೆಯಲು ಉತ್ತೇಜಿಸುವಂತೆ ಕೋರಿದ್ದಾರೆ.
ಜನರು ಈಗಲೂ ಕೋವಿಡ್ ಸೂಕ್ತ ನಡವಳಿಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಆಗ್ನೇಯ ಏಷ್ಯಾ ಮತ್ತು ಯುರೋಪ್‍ನ ಕೆಲ ದೇಶಗಳಲ್ಲಿ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಉನ್ನತ ಮಟ್ಟದ ಸಭೆ ನಡೆಸಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗದಂತೆ ಎಲ್ಲಾ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು ಈಗ ದೈನಂದಿನ ಪ್ರಕರಣಗಳು 5,000ಕ್ಕಿಂತಲೂ ಕಡಿಮೆಯಿದೆ.