ಕಾಸರಗೋಡು : ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ ಅವರು ಮಾರ್ಚ್ 11 ರಂದು ಕಾಸರಗೋಡಿಗೆ ಆಗಮಿಸಲಿದ್ದು 12 ಮತ್ತು 13 ರಂದು ಕಾಸರಗೋಡಿನ ವಿವಿಧ ಭಾಗಗಳಿಗೆ ಭೇಟಿನೀಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಲಿದ್ದಾರೆ.
11 ರಂದು ಬೆಳಗ್ಗೆ ಅಧ್ಯಕ್ಷರಾದ ಡಾ. ಸಿ ಸೋಮಶೇಖರ ಅವರು ಕಾಸರಗೋಡು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಚರ್ಚಿಸುವರು. ಅದರ ಬಳಿಕ ಮಧ್ಯಾಹ್ನ 12 ಗಂಟೆಗೆ ಎಡನೀರು ಮಠದ ಸಭಾಂಗಣದಲ್ಲಿ ಕಾಸರಗೋಡಿನ ವಿವಿಧ ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಗಳ ಜತೆ ಹಾಗೂ ಕನ್ನಡ ಶಾಲಾ ಕಾಲೇಜುಗಳ ಅಧಿಕೃತರು ಹಾಗೂ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸುವರು. ಅದರ ಅನಂತರ ಕಾಸರಗೋಡಿನ ಹಲವು ಕನ್ನಡ ಶಾಲೆಗಳಿಗೆ ಅವರು ಭೇಟಿ ನೀಡಲಿದ್ದಾರೆ. 12 ಶನಿವಾರದಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ರಂಗಚಿನ್ನಾರಿ ಸಂಸ್ಥೆಯ ವತಿಯಿಂದ ನಡೆಯುವ ಕನ್ನಡ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಕಾಸರಗೋಡಿನ ವಿವಿಧ ಸಂಘಸಂಸ್ಥೆಗಳಿಗೆ ಭೇಟಿ ನೀಡುವರು. 13 ಆದಿತ್ಯವಾರ ಅವರು ಮಂಜೇಶ್ವರ ಗೋವಿಂದ ಪೈ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡುವರು.
11 ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಎಡನೀರು ಮಠದ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಗಳ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಮಾಲೋಚನ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಭಾಗವಹಿಸಲು ಕೋರಲಾಗಿದೆ. ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಮತ್ತು ಪರಿಹಾರೋಪಾಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.