ಮುಳ್ಳೇರಿಯ: ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ)ದಲ್ಲಿ ಸಂಜೆ ಒಪಿ ವಿಭಾಗ ಆರಂಭವಾಗಿದೆ. ಇನ್ನು ಮಧ್ಯಾಹ್ನದ ನಂತರ ಆಸ್ಪತ್ರೆಯಲ್ಲಿ ವೈದ್ಯರು, ಸ್ಟಾಫ್ ನರ್ಸ್ ಹಾಗೂ ಫಾರ್ಮಸಿಸ್ಟ್ ಸೇವೆ ಲಭ್ಯವಾಗಲಿದೆ. ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಈ ಸೇವೆಗಳು ಲಭ್ಯವಿರಲಿದೆ.
ಆರೋಗ್ಯ ಕೇಂದ್ರದ ಸಂಜೆ ಓಪಿಯನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಸೋಮವಾರ ಉದ್ಘಾಟಿಸಿದರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಕೆ. ನಾರಾಯಣನ್, ಬ್ಲಾಕ್ ಸದಸ್ಯ ಎಂ. ಕುಂಞಂಬು ನಾಯರ್, ಗ್ರಾಮ ಪಂಚಾಯಿತಿ ಪ್ರತಿನಿಧಿಗಳಾದ ಅನೀಸ್ ಮನ್ಸೂರ್, ಕೆ. ಮೋಹನನ್, ಎಚ್‍ಎಂಸಿ ಸದಸ್ಯರು, ರಾಜಕೀಯ ಪ್ರತಿನಿಧಿಗಳು ಮತ್ತು ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ. ದಿವ್ಯಾ ಸ್ವಾಗತಿಸಿ, ಮುಖ್ಯ ಗುಮಾಸ್ತ ಅಶೋಕ್ ಕುಮಾರ್ ಕೋಟೂರ್ ವಂದಿಸಿದರು.