ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಪುತ್ರ ಝೈನ್ ನಾದೆಳ್ಲ (26) ಮಾ. 01 ರಂದು ನಿಧನರಾಗಿದ್ದಾರೆಂದು ಮೈಕ್ರೋ ಸಾಫ್ಟ್ ಸಂಸ್ಥೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
26 ವರ್ಷದ ಝೈನ್ ನಾದೆಳ್ಲಾಗೆ ಹುಟ್ಟಿದಾಗಿನಿಂದ ಸೆರೆಬ್ರಲ್ ಪಾಲ್ಸಿ ಎಂಬ ಸಮಸ್ಯೆ ಕಾಡುತ್ತಿತ್ತು. ಮೈಕ್ರೋಸಾಫ್ಟ್ ಶೋಕ ಸಂದೇಶ ರವಾನಿಸಿದ್ದು, ಪುತ್ರನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಶೋಕದಿಂದ ಹೊರಬರಲು ಒಂದಷ್ಟು ಸಮಯ ನೀಡುವಂತೆ ಸಂಸ್ಥೆ ತನ್ನ ಪ್ರಮುಖ ಅಧಿಕಾರಿಗಳಿಗೆ ತಿಳಿಸಿದೆ.
2014 ರಿಂದ ಸಿಇಒ ಆಗಿ ನೇಮಕಗೊಂಡಾಗಿನಿಂದಲೂ ಮೈಕ್ರೋಸಾಫ್ಟ್ ನ ಉತ್ಪನ್ನಗಳನ್ನು ಉತ್ತಮಗೊಳಿಸುವತ್ತ ನಾದೆಳ್ಲಾ ಮಹತ್ವದ ಹೆಜ್ಜೆಗಳನ್ನಿರಿಸಿದ್ದರು. ಅಷ್ಟೇ ಅಲ್ಲದೇ ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಉತ್ತಮ ಸೇವೆಗಳನ್ನು ಒದಗಿಸುವತ್ತ ಗಮನ ಕೇಂದ್ರೀಕರಿಸಿದ್ದ ನಾದೆಳ್ಲ, ತಮ್ಮ ಮಗನಿಂದ ಹಲವು ಅಂಶಗಳನ್ನು ಕಲಿತಿದ್ದಾಗಿ ಹೇಳಿದ್ದರು. ಝೈನ್ ತಮ್ಮ ಜೀವಿತಾವಧಿಯಲ್ಲಿ ಗರಿಷ್ಠ ಚಿಕಿತ್ಸೆ ಪಡೆದಿದ್ದ ದಿ ಚಿಲ್ಡ್ರನ್ಸ್ ಆಸ್ಪತ್ರೆ ಕಳೆದ ವರ್ಷ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್ ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಝೈನ್ ನಾದೆಳ್ಲಾ ದತ್ತಿ ಪೀಠಕ್ಕೆ ಸೆರ್ಪಡೆಗೊಂಡಿತ್ತು.
ಝೈನ್ ಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇತ್ತು, ಆತನ ಪ್ರಕಾಶಮಾನವಾದ ನಗುಮೊಗದ ಮೂಲಕ ಎಲ್ಲರ ಸ್ಮೃತಿಯಲ್ಲಿ ಉಳಿಯಲಿದ್ದಾನೆ ಎಂದು ಚಿಲ್ಡ್ರನ್ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರ್ರಿಂಗ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.