ಇಸ್ಲಾಮಬಾದ್: ಕೆಳ ಸದನದಲ್ಲಿ ಬಹುಮತವನ್ನು ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮೇಲಿನ ಮತಕ್ಕೆ ಪ್ರತಿಪಕ್ಷ ಶಾಸಕರು ಒತ್ತಾಯಿಸಿದ ನಂತರ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಭಾನುವಾರದವರೆಗೂ ಇಂದು ಮುಂದೂಡಲಾಯಿತು.
ಸಂಸತ್ ಭವನದಲ್ಲಿ ನ್ಯಾಷನಲ್ ಅಸೆಂಬ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆಯೇ, ಉಪ ಸಭಾಪತಿ ಕಾಸಿಂ ಸುರಿ ಅಜೆಂಡಾದಲ್ಲಿ ಪಟ್ಟಿ ಮಾಡಲಾದ ಅಂಶಗಳನ್ನು ಚರ್ಚಿಸಲು ಶಾಸಕರನ್ನು ಕೇಳಿದರು.
ಆದಾಗ್ಯೂ, ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲೆ ಕೂಡಲೇ ಮತಕ್ಕೆ ಅವಕಾಶ ನೀಡುವಂತೆ ಪ್ರತಿಪಕ್ಷಗಳ ಶಾಸಕರು ಆಗ್ರಹಿಸಿದರು. ತದನಂತರ ಉಪ ಸಭಾಪತಿ ಸುರಿ. ಸದನವನ್ನು ಭಾನುವಾರ ಬೆಳಗ್ಗೆ 11 ಗಂಟೆಯವರೆಗೆ ಮುಂದೂಡಿದರು.
ಇಮ್ರಾನ್ ಖಾನ್ ವಿರುದ್ಧ ನ್ಯಾಷನಲ್ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ಮುಖಂಡ ಸೆಯ್ ಬಾಜ್ ಶರೀಫ್ ಮಾರ್ಚ್ 28 ರಂದು ಅವಿಶ್ವಾಸ ನಿರ್ಣಯ ಮಂಡಿಸಿದರು. ಅದೇ ದಿನ ಅದರ ಮೇಲಿನ ಚರ್ಚೆಗೆ ಅನುಮತಿ ನೀಡಲಾಗಿತ್ತು. ಏಪ್ರಿಲ್ 3 ರಂದು ಅವಿಶ್ವಾಸ ನಿರ್ಣಯ ಮೇಲೆ ಮತದಾನ ನಡೆಯುವ ಸಾಧ್ಯತೆಯಿದೆ.