ನವದೆಹಲಿ :ಸೋಮವಾರದಿಂದ ಕಾರ್ಯಾಚರಿಸಲಿರುವ ಅಂತರ್‌ರಾಷ್ಟ್ರೀಯ ವಿಮಾನಯಾನಗಳಿಗಾಗಿನ ತನ್ನ ಮಾರ್ಗದರ್ಶಿ ಸೂತ್ರಗಳನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ರವಿವಾರ ಪರಿಷ್ಕರಿಸಿದೆ. ಸುರಕ್ಷಿತ ಅಂತರಕ್ಕಾಗಿ ಪ್ರಯಾಣಿಕರ ನಡುವೆ ತಲಾ ಮೂರು ಸೀಟುಗಳನ್ನು ಖಾಲಿಬಿಡಬೇಕೆಂಬ ನಿಯಮವನ್ನು ಕೂಡಾ ಅದು ರದ್ದುಪಡಿಸಿದೆ.
ಪರಿಷ್ಕೃತ ಮಾರ್ಗದರ್ಶಿಸೂತ್ರಗಳ ಪ್ರಕಾರ ಸಂಪೂರ್ಣ ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ ಕಿಟ್)ನ್ನು ವಿಮಾನಯಾನ ಸಿಬ್ಬಂದಿ ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಕೂಡಾ ಕೈಬಿಡಲಾಗಿದೆ. ವಿಮಾನನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಮೈದಡವಿ ಶೋಧನ ನಡೆಸುವ ಕ್ರಮವನ್ನು ಮರುಜಾರಿಗೊಳಿಸಲಾಗಿದೆ.
ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ 2020ರ ಮಾಚ್ 23ರಿಂದೀಚೆಗೆ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಅಮಾನತುಗಳಿಸಲಾಗಿತ್ತು. ಆದಾಗ್ಯೂ 2020ರ ಜುಲೈ ತಿಂಗಳಿನಿಂದೀಚೆಗೆ ಭಾರತ ಹಾಗೂ ಆಸುಪಾಸಿನ 45 ದೇಶಗಳ ನಡುವೆ ವಿಶೇಷ ಪ್ರಯಾಣಿಕ ವಿಮಾನಗಳ ತಾತ್ಕಾಲಿಕ ಸಂಚಾರವನ್ನು ಏರ್ಪಡಿಸಲಾಗಿತ್ತು.