ಕಾಸರಗೋಡು: ಜೀವನದಲ್ಲಿ ಒಂಟಿಯಾಗಿರಬಾರದು ಎಂದು ಗೆಳೆಯನನ್ನು ಹುಡುಕುತ್ತಿರುವವರು ಹಲವರು ನಮ್ಮ ಜೊತೆ ಇದ್ದೇ ಇದ್ದಾರೆ. ವಿವಿಧ ವಯೋಮಾನದ ಅವರು ತಮ್ಮ ಅಗತ್ಯತೆಗಳು ಮತ್ತು ಮಾಹಿತಿಯನ್ನು ನಿರೀಕ್ಷೆಗಳೊಂದಿಗೆ ಪ್ರಸ್ತುತಪಡಿಸಿದರು. ನಂತರ ಒಪ್ಪಿಗೆ ಇದ್ದವರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಏಕಾಂತ ಮತ್ತು ಹತಾಶೆಯಲ್ಲಿ ಬದುಕುತ್ತಿದ್ದ ಕೆಲವರಲ್ಲಿ ಭರವಸೆಗಳು ಇದೀಗ ಮೂಡಿಬರುತ್ತಿರುವುದು ಗಮನಾರ್ಹವಾಗಿದೆ. ಈ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದವರು ಆರು ಮಂದಿ.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ಮಹಿಳಾ ರಕ್ಷಣಾ ಕಛೇರಿ ಹಾಗೂ ಜಿಲ್ಲಾ ಮಟ್ಟದ ಸೆಲ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿಧವೆ ಮಹಿಳೆಯರ ಸಮಗ್ರ ಉನ್ನತಿ ಮತ್ತು ರಕ್ಷಣೆಗಾಗಿ ಏರ್ಪಡಿಸಿದ್ದ ಜಂಟಿ ಸಭೆ ವಿಶಿಷ್ಟ ಅನುಭವ ನೀಡಿತು. ಹೊಸ ಒಡನಾಡಿಗಳ ಹುಡುಕಾಟದಲ್ಲಿ ಕೋಝಿಕ್ಕೋಡ್ ಜಿಲ್ಲೆಯಿಂದ ಕಾಸರಗೋಡುವರೆಗೆ 56 ಜನರು ಭಾಗವಹಿಸಿದ್ದರು. 31 ಮಹಿಳೆಯರು ಮತ್ತು 25 ಪುರುಷರು.
ಈ ಹಿಂದಿನ ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು ಅವರ ಕಲ್ಪನೆ 2021ರಲ್ಲಿ ಮೂಡಿಬಂದಿತ್ತು. ಬಳಿಕ ಮಹಿಳಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಯಾಗಿದೆ. ಮರು ವಿವಾಹದ ಆಸಕ್ತಿಯುಳ್ಳವರಿಗೆ ಈ ಯೋಜನೆ ನೆರವಾಗಲಿದೆ. ಇದಕ್ಕಾಗಿ ನಿರ್ಮಿಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ವಿವಾಹಕ್ಕೆ ಸ್ವಯಂಪ್ರೇರಿತರಾದ ಪುರುಷರಿಂದ ಅರ್ಜಿಯನ್ನು ಸ್ವೀಕರಿಸಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ವಿಧವೆಯರ ಸಭೆಗೆ ಆಹ್ವಾನಿಸಲಾಗುತ್ತದೆ. 2021 ರಲ್ಲಿ ಕಾಞಂಗಾಡ್ ಆಯೋಜಿಸಿದ್ದ ಮೊದಲ ಕೂಟದಲ್ಲಿ ಸುಮಾರು 45 ಜನರು ಭಾಗವಹಿಸಿದ್ದರು.
ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳು ಮಾತನಾಡಿ, ಜಂಟಿ ಸಭೆ ನಡೆಸುವುದು ಉತ್ತಮ ವಿಚಾರವಾಗಿದ್ದು, ಪ್ರತ್ಯೇಕವಾಗಿರುವವರಿಗೆ ಇಂತಹ ಸಭೆಗಳು ನೆರಳು ನೀಡುತ್ತವೆ ಎಂದರು.
ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಎಂ.ವಿ.ಸುನಿತಾ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್, ಕಾಞಂಗಾಡ್ ಡಿವೈಎಸ್ಪಿ ವಿ.ಬಾಲಕೃಷ್ಣನ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಎ.ಬಿಂದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಿಭಾಗಾಧಿಕಾರಿ ಕೆ. ದಿನೇಶ್ ಮತ್ತು ವಿಶೇಷ ವಿಭಾಗದ ಡಿವೈಎಸ್ಪಿ ಪಿ.ಕೆ.ಸುಧಾಕರನ್ ಮಾತನಾಡಿದರು.