ಸ್ಥೂಲಕಾಯತೆಯಿಂದ ನಮ್ಮ ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ದೊಡ್ಡ ಪರಿಣಾಮ ಹೊಟ್ಟೆ ಮತ್ತು ಕತ್ತಿನ ಮೇಲೆ ಗೋಚರಿಸತೊಡಗುತ್ತದೆ. ಈ ಸಮಸ್ಯೆಯಿಂದ ಕುತ್ತಿಗೆಯಲ್ಲಿ ಕೊಬ್ಬು ಸಂಗ್ರಹವಾಗಿ, ಊದಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ಕುಂದಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ವ್ಯಾಯಾಮ ಮತ್ತು ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಹಾಗಾದರೆ, ಕತ್ತಿನ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಕುತ್ತಿಗೆಯ ಕೊಬ್ಬನ್ನು ಕಡಿಮೆ ಮಾಡುವ ತಂತ್ರಗಳನ್ನು ಈ ಕೆಳಗೆ ನೀಡಲಾಗಿದೆ:
ಆಹಾರದ ಬದಲಾವಣೆ: ಕುತ್ತಿಗೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕಲು, ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಾಲು, ಮೊಸರು, ಧಾನ್ಯಗಳು ಮತ್ತು ಹಣ್ಣುಗಳನ್ನು ಸೇರಿಸಿ. ನಿಮ್ಮ ಆಹಾರದಲ್ಲಿ ಜಂಕ್ ಫುಡ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ, ಸಾಧ್ಯವಾದರೆ ಸಂಪೂರ್ಣ ತ್ಯಜಿಸಿ. ಇವುಗಳು ನಿಮ್ಮ ದೇಹದಲ್ಲಿ ಕೊಬ್ಬಿನ ಸಂಗ್ರಹಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.ಸರಿಯಾದ ಭಂಗಿ: ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಡೆಯುವುದು ಸಂಪೂರ್ಣ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ನೀಡುವುದು. ಆದ್ದರಿಂದ ಕುಳಿತುಕೊಳ್ಳುವಾಗ ಕುತ್ತಿಗೆಯನ್ನು ಬಾಗಿಸಿ ಕುಳಿತುಕೊಳ್ಳಬೇಡಿ. ಇದರಿಂದಾಗಿ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದಷ್ಟು ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ.
ಅಧಿಕ ಕೊಬ್ಬಿನ ಆಹಾರ ಬೇಡ: ದೇಹವು ಸ್ಯಾಚುರೇಟೆಡ್ ಕೊಬ್ಬಿನಿಂದ ಯಾವುದೇ ರೀತಿಯ ಪೋಷಣೆಯನ್ನು ಪಡೆಯುವುದಿಲ್ಲ. ಇದರಿಂದ ದೇಹದ ತೂಕ ಹೆಚ್ಚುತ್ತದೆ. ಇದಕ್ಕಾಗಿ, ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿ. ಇವುಗಳಲ್ಲಿ ಅಧಿಕ ಕೊಬ್ಬು ಇರುತ್ತವೆ. ಬದಲಾಗಿ ನೈಸರ್ಗಿಕ ಕೊಬ್ಬಿರುವ ಆಹಾರವನ್ನು ಸೇವಿಸಿ.
ಪ್ರೋಟೀನ್ ಸೇವಿಸಿ: ಕತ್ತಿನಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕಲು ಕೋಳಿ ಮತ್ತು ಮೀನುಗಳನ್ನು ತಿನ್ನಿರಿ, ಏಕೆಂದರೆ ಅವುಗಳು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿರುತ್ತವೆ, ಇದು ಸ್ನಾಯುಗಳನ್ನು ಬಲಪಡಿಸಿ, ಕೊಬ್ಬು ಸಂಗ್ರಹವಾಗುವುದನ್ನು ತಡೆಯುವುದು.
ಯೋಗ ಮಾಡಿ: ದೈನಂದಿನ ಜೀವನದಲ್ಲಿ ಯೋಗವನ್ನು ಸೇರಿಸುವುದರಿಂದ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಲಾಭಗಳಿವೆ. ಅದೇ ರೀತಿ ಬ್ರಹ್ಮ ಮುದ್ರಾ ಯೋಗ ಮಾಡುವುದರಿಂದ ಕತ್ತಿನ ಕೊಬ್ಬು ತುಂಬಾ ಕಡಿಮೆಯಾಗುತ್ತದೆ. ಈ ಆಸನದಲ್ಲಿ ಕುತ್ತಿಗೆಯನ್ನು ನಾಲ್ಕು ದಿಕ್ಕುಗಳಿಗೂ ತಿರುಗಿಸಲಾಗುತ್ತದೆ. ಇದರಿಂದ ಕುತ್ತಿಗೆಯಲ್ಲಿ ಸಂಗ್ರಹವಾಗಿರುವ ಕೊಬ್ಬು ಕಡಿಮೆಯಾಗುವುದು. ಇದರ ಹೊರತಾಗಿ, ಇತರ ಕುತ್ತಿಗೆ ವ್ಯಾಯಾಮಗಳನ್ನು ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.