ತಿರುವನಂತಪುರ: ಮರಗೆಣಸಿನಿಂದ ಕಡಿಮೆ ಅಮಲಿನ ಆಲ್ಕೋಹಾಲ್ ತಯಾರಿಸಬಹುದು ಎಂದು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಹೇಳಿದ್ದಾರೆ. ಕಡಿಮೆ ಶಕ್ತಿಯುತವಾದ ಆಲ್ಕೋಹಾಲ್ ಅನ್ನು ಉತ್ಪಾದಿಸುವುದರಿಂದ ಪ್ರಬಲವಾದ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಬಹುದಾಗಿದೆ. ಆಲ್ಕೊಹಾಲ್-ಸಂಬಂಧಿತ ಕ್ರಮಗಳನ್ನು ಅನುಮೋದಿಸಲು ಬೇರೆ ಯಾವುದೇ ಕಾನೂನು ಅಗತ್ಯವಿಲ್ಲ ಎಂದಿರುವರು. ಮೊನ್ನೆ ಬಜೆಟ್‍ನಲ್ಲಿ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ತಿರುವನಂತಪುರ ಟ್ಯೂಬರ್ ಸಂಶೋಧನಾ ಕೇಂದ್ರದಲ್ಲಿ ಎಥೆನಾಲ್ ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಮರಗೆಣಸಿನಿಂದ ಉತ್ಪಾದಿಸುವ ಯೋಜನೆಗೆ 2 ಕೋಟಿ ರೂ. ಘೋಷಿಸಿದ್ದರು. ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಮರಗೆಣಸಿನ ಬೆಳೆಗಾರರಿಗೆ ದೊಡ್ಡ ವರದಾನವಾಗಲಿದೆ. ಮರಗೆಣಸು ಕೃಷಿಯನ್ನು ಹೆಚ್ಚು ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದ್ದರು.
ಹಣ್ಣುಗಳು ಮತ್ತು ಇತರ ಕೃಷಿ ಉತ್ಪನ್ನಗಳಿಂದ ಎಥೆನಾಲ್ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಮತ್ತು ಕಡಿಮೆ ಆಲ್ಕೋಹಾಲ್ ಇರುವ ಮದ್ಯವನ್ನು ಉತ್ಪಾದಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೊನ್ನೆ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಮೊದಲ ಹಂತದಲ್ಲಿ ಮರಗೆಣಸಿನಿಂದ ಎಥೆನಾಲ್ ತಯಾರಿಸಲು ಸಂಶೋಧನೆ ನಡೆಸಲಾಗುತ್ತಿದೆ. ಬಜೆಟ್ ನಲ್ಲಿ ಮೌಲ್ಯವರ್ಧಿತ ಕೃಷಿ ಮಿಷನ್ ಎಂಬ ವಿಶೇಷ ಯೋಜನೆಯನ್ನೂ ಘೋಷಿಸಲಾಗಿದೆ. ಶೀಘ್ರದಲ್ಲಿಯೇ ಯೋಜನೆ ಜಾರಿಯಾಗಲಿದೆ. ಬಜೆಟ್ ಘೋಷಣೆಯಾಗಿರುವುದರಿಂದ ಶೀಘ್ರದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ತಿರುವನಂತಪುರಂನಲ್ಲಿರುವ ಸೆಂಟ್ರಲ್ ಟ್ಯೂಬರ್ ರಿಸರ್ಚ್ ಸ್ಟೇಷನ್‍ನ ತಜ್ಞರು ಈ ಹಿಂದೆ ಒಂದು ಕಿಲೋಗ್ರಾಂ ಮರಗೆಣಸಿನಿಂದ ಸುಮಾರು 250 ಮಿಲಿಲೀಟರ್ ಸ್ಪಿರಿಟ್ ಉತ್ಪಾದಿಸಬಹುದಾಗಿದ್ದು, ಇದರ ಬೆಲೆ ಕೇವಲ 48 ರೂ. ಎಂದು ಹೇಳಿಕೆ ನೀಡಿದ್ದರು. ತಂತ್ರಜ್ಞಾನವು ಕೇಂದ್ರದಿಂದ ಪೇಟೆಂಟ್ ಪಡೆದಿದೆ. ಆಸ್ಪತ್ರೆಗಳು ಸೇರಿದಂತೆ ಇತರ ಅಗತ್ಯ ವರ್ಗಗÀಳಿಗೆ ಸ್ಪಿರಿಟ್ ಅಗತ್ಯವಿದೆ. ಕೇರಳದಲ್ಲಿ 18 ರಿಂದ 22 ಲಕ್ಷ ಮರಗೆಣಸು ಬೆಳೆಗಾರರಿದ್ದಾರೆ ಎಂದು ಅಂದಾಜಿಸಲಾಗಿದೆ. 6.97 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮರಗೆಣಸು ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‍ಗೆ 8000 ಗಿಡ ಪಡೆಯಬಹುದು. ಬೇರೆ ಯಾವುದೇ ತೊಂದರೆಗಳಿಲ್ಲದಿದ್ದರೆ 35 ರಿಂದ 45 ಟನ್ ಇಳುವರಿ ಬರಲಿದೆ ಎನ್ನಲಾಗಿದೆ.