ಕಾಸರಗೋಡು: ಮುಸುಕುಧಾರಿಗಳ ತಂಡವೊಂದು ದಾಳಿ ನಡೆಸಿ, ಇರಿದ ಪರಿಣಾಮ ಚೌಕಿ ಸಿಪಿಸಿಆರ್‍ಐ ಸನಿಹದ ನಿವಾಸಿ, ನಗರದ ನುಳ್ಳಿಪ್ಪಾಇಯ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಡಾ. ಶಾಬಿನ್(28)ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾಬಿನ್ ತನ್ನ ತಾಯಿಯೊಂದಿಗೆ ಚೌಕಿಯ ಮನೆಗೆ ವಾಪಸಾದ ಸಂದರ್ಭ ಘಟನೆ ನಡೆದಿದೆ. ತಾಯಿ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಹಿಂದೆಯಿದ್ದ ಶಾಬಿನ್ ಅವರ ಮೇಲೆ ಮೂರು ಮಂದಿಯ ತಂಡ ಆಕ್ರಮಣ ನಡೆಸಿದೆ. ತಾಯಿ ಬೊಬ್ಬಿಡುತ್ತಿದ್ದಂತೆ ತಂಡ ಪರಾರಿಯಾಗಿದೆ. ತಕ್ಷಣ ಶಾಬಿನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ವರ್ಷದ ಹಿಂದೆಯಷ್ಟೆ ಶಾಬಿನ್ ವೈದ್ಯವೃತ್ತಿಗೆ ಕಾಲಿರಿಸಿದ್ದರು. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು.